ಭಾನುವಾರ, ಏಪ್ರಿಲ್ 3, 2011

ಮಲೆನಾಡಿನ ಬೆಳದಿಂಗಳ ರಾತ್ರಿ

ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ.ರಾತ್ರಿ ಬೇಟೆ ಹುಡುಕುವ ಬಾವಲಿಗಳ ಹಿಂಡು ತಿಂಗಳ ಬೆಳಕಿನಲ್ಲಿ ಗೋಚರಿಸುತಿವೆ.ಈ ವಿದ್ಯಮಾನಗಳು ನಡೆಯುವ ವೇಳೆಯಲ್ಲೇ ಕೆಳಗೆ,ತುಂಬ ಕೆಳಗೆ ಬೆಂಕಿಯ ಜ್ವಾಲೆ ದಗದಗಿಸಿ ಉರಿಯುತ್ತಿದೆ.ಆ ದಗದಗಿಸುವ ಬೆಂಕಿಯ ಬೆಳಕು ಸುತ್ತಲೂ ಕುಳಿತು ಚಳಿ ಕಾಯಿಸುತ್ತಿರುವ ಮಂದಾಯ ಕಣ್ಣುಗಳಲ್ಲಿ ಪ್ರತಿಪಲಿಸುತ್ತಿದೆ.ಅಲ್ಲೆ ಬೆಂಕಿಯ ಒಂದು ಬದ್ದಿಯಲ್ಲಿ ನಾಯಿಯೊಂದು ಮುದುಡಿ ಮಲಗಿದೆ.ಕಾಡುಗತ್ತಲೆಯ ಗರ್ಭದೊಳಗಿಂದ ಜೀರುಂಡೆಗಳ ಜಿರ್ ಜಿರ್ ಸದ್ದು ಸನ್ನಿವೇಶಕ್ಕೆ ಹಿಮ್ಮೇಳವನ್ನು ಒದಗಿಸಿದೆ.ಮಿಂಚುಹುಳುಗಳು ಅಲ್ಲೊಂದು ಇಲ್ಲೊಂದು ಬೆಳಗಿ,ಮಸಿಗತ್ತಲೆಯ ನಡುವೆ ಬೆಳಕಿನ ಕಿಡಿಯನ್ನು ಸೋಕಿಸಿ ಬೆಳಕಿನ ಇರುವಿಕೆಯನ್ನು ಸಾರಿಸಾರಿ ಹೇಳುತಿದೆ.ಕಾನನದ ಯಾವುದೋ ಮೂಲೆಯಲ್ಲಿ ನರಿಯೊಂದು ಊಳಿಡುತ್ತಿದೆ.

ಕಾಮೆಂಟ್‌ಗಳಿಲ್ಲ: