ಭಾನುವಾರ, ಅಕ್ಟೋಬರ್ 30, 2011

ಮಲೆನಾಡ ಹುಡುಗಿಯರು

ಮಲೆನಾಡಿನ ಹುಡುಗಿಯರು,
ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು,
ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ,ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು,

ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ ಗದ್ದೆಗಿಳಿದು ಕಳೆಯ ಕೀಳುವವರು,
ಕೈಯಲ್ಲಿ ಪುಸ್ತಕವ ಹಿಡಿದು ಕಣದಿ ಹರಡಿದ ಕಾಫಿ ಬೇಳೆಯ ಮೇಲೆ ಕಾಲಾಡಿಸುತ್ತಾ,ಪರೀಕ್ಷೆಗೆ ಓದಿಕೊಳ್ಳುವವರು,

ಇವರು ಗಂಭೀರವದನೆಯರು,ಚೆಲುಚೆಲುಚೆಲುವಿಯರು,ಗಯ್ಯಾಳಿ ಮಾಯಾಂಗನೆಯರು,

ಕೋಮಲೆಯರು,ಸಣ್ಣಮಾತಿಗೆಲ್ಲಾ ಕಣ್ಣ, ನೀರಕೊಳವಾಗಿಸುವವರು
ನಾಚುತ್ತಾತಲೆತಗಿಸಿ ಓದಲು ಬರುವ,ಇವರ ಕೆಣಕಿದರೇ ಆಗುವರು ಕಿರಗೂರಿನ ಗಯ್ಯಾಳಿಗಳು

ಮಂಗಳವಾರ, ಜೂನ್ 14, 2011

ಪ್ರಾರ್ಥನೆ

ದೋ ಎಂದು ಸುರಿದರೇ ಹಾಳು ಮಳೆ ಎನ್ನುವ

ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ

ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ

ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು

ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು

ನಿನಗೆ ತಿಳಿಯದೇ ಮಳೆಯ ಲೆಕ್ಕ?

ನಮ್ಮ ಪ್ರಾರ್ಥನೆ ಇಷ್ಟೆ.

ನೋಡಿ ಬಾರಯ್ಯ ವರುಣ
ಜೀವದ ಮೇಲಿರಲಿ ಕರುಣ

ಶುಕ್ರವಾರ, ಮೇ 13, 2011

ಮಂಗಳವಾರ, ಏಪ್ರಿಲ್ 12, 2011

ಕವಿಯಾಗಬೇಕೆಂದರೆ

'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು? ಸುತ್ತಲಿನ ಜಗತ್ತನ್ನು ಗಮನಿಸುತಿರಬೇಕು ಎಂದಿರಬಹುದೇ?ಅಥವಾ ಬರೆದ ಬರಹ ಅಥವಾ ಕವಿತೆಯೊಂದನ್ನು ಕೇಳಲು ಕೇಳುಗರಿರಬೇಕೆಂಬುದು ಇದರ ಅರ್ಥವೆ? ನಮ್ಮ ನಾಡಿನ ಕವಿಗಳ ಜೀವನ ಚರಿತ್ರೆಗಳನ್ನು ಓದಿದಾಗ ತಿಳಿಯುದೇನೆಂದರೆ ಅವರೆಲ್ಲಾ ಹೆಚ್ಚುಹೆಚ್ಚು ಪುಸ್ತಕಗಳನ್ನು ಓದುತ್ತಿದರು.ಮತ್ತು ಅವರ ಗೀಚಿದನೆಲ್ಲ ಕೇಳಿ ಪ್ರೋತ್ಸಾಹಿಸುವವರು ಇದ್ದರು.ತಾ.ರಾ.ಸು.ರವರು ಪುಸ್ತಕ ಓದಲೆಂದೇ ಎರಡು ಬಾರಿ ಮನೆ ಬಿಟ್ಟು ಓಡಿಹೋಗಿದರಂತೆ.ತಾ.ರಾ.ಸು.ರವರ ಸಂಬಂದಿಕರಾದ ವೆಂಕಣಯ್ಯನವರು ತಾ.ರಾ.ಸು.ರವರ ಓದುವ ಹವ್ಯಾಸವನ್ನು ಗುರುತಿಸಿ ಬೇರೆ ಯಾರಿಗೂ ಪ್ರವೇಶವಿರದ ತಮ್ಮ ಮನೆಯ ಗಂಥ್ರಾಲಯದ ಪುಸ್ತಕವನ್ನು ಓದಲು ಹೇಳಿದರು. ಹಾಗೇಯೇ ಕುವೆಂಪುರವರು ಓದಲು ಮೈಸೂರಿಗೆ ಬಂದಾಗ ಹೆಚ್ಚಿನ ಸಮಯ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು.ಕುವೆಂಪುರವರು ಓದಬೇಕೆಂದುಕೊಂಡ ಪುಸ್ತಕ ಬೇರೆಯಾರದರೂ ಓದುತ್ತಿದರೆ,ಅವರು ಓದುವವರೆಗೆ ಕಾದು ನಂತರ ಓದುತ್ತಿದರು.ಅದೇ ಗ್ರಂಥಾಲಯದಲ್ಲಿ ಓದಿದ್ದ ವಿವೇಕಾನಂದ,ರಾಮಕಷ್ಣಪರಮಹಂಸ,ಶಾರದಮಾತೆಯವರ ಜೀವನ ಚರಿತ್ರೆ,ಕುವೆಂಪುರವರ ಬದುಕನ್ನೇ ಬದಲಾಯಿಸಿತು.ದೇಶ-ವಿದೇಶದ ಪ್ರಖ್ಯಾತ ಕವಿಗಳ ಕೃತಿಗಳ ಓದು,ಬೇರೆ ದೇಶದ ಜನಜೀವನವನ್ನು ಅರಿಯಲು ಸಹಾಯಕವಾಯಿತು. ಸಾಹಿತ್ಯ ಎಂದರೆ ನಮ್ಮ ಅನುಭವ ಅಥವಾ ಭಾವನೆಯನ್ನು ಉಚಿತ ರೀತಿಯಲ್ಲಿ ದಾಖಲಿಸುವುದು.ಪುಸ್ತಕಗಳನ್ನು ಓದುವ ಮೂಲಕ,ಸುತ್ತಲಿನ ವಿದ್ಯಮಾನಗಳನ್ನು ಗಮನಿಸುವುದರಿಂದ ನಮ್ಮ ಭಾವಕೋಶ ಬೆಳೆಯುತ್ತದೆ.ಆ ಮೂಲಕ ಉತ್ತಮ ಸಾಹಿತ್ಯಸೃಷ್ಟಿ ಸಾಧ್ಯ.ಇನ್ನೂ ಕಥೆ ಕವನಗಳನ್ನು ಕೇಳುವ,ಪ್ರೋತ್ಸಾಹಿಸುವವರು ಈಗ ಕಡಿಮೆಯೆಂದೇ ಹೇಳಬಹುದು.ಕೇಳುಗರಲ್ಲದವರ ಬಳಿ ಹೇಳಿಕೊಳ್ಳುವುದು ಅಪಾಯಕಾರಿ.ಯಾಕೆಂದರೇ ಆನಂತರ ನಮ್ಮನ್ನು ನೋಡುವ ಅವರ ದೃಷ್ಟಿಯೇ ಬದಲಾಗಬಹುದು.ಕೇಳುಗರಿಲ್ಲದ ಕವನ ಮಂಕಾಗುತ್ತದೆ.ಆಗಷ್ಟೇ ಅರಳುತ್ತಿರುವ ಕವಿ ತೆರೆಮರೆಗೆ ಸರಿಯುತ್ತಾನೆ. ಓದುವ ಹವ್ಯಾಸವಿದ್ದು,ಬರೆದದ್ದನೆಲ್ಲಾ ಕೇಳುವ ಕೇಳುಗರಿದ್ದರೆ ಕವಿಗಳಾಗುವುದರಲ್ಲಿ ಸಂದೇಹವಿಲ್ಲ.

ಗುರುವಾರ, ಏಪ್ರಿಲ್ 7, 2011

ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ನಿಗೂಢವ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ ಜೊತೆಯಲ್ಲಿ ಮನಬಿಚ್ಚಿ ಹಾಡು.

ಭಾನುವಾರ, ಏಪ್ರಿಲ್ 3, 2011

ಮಲೆನಾಡಿನ ಬೆಳದಿಂಗಳ ರಾತ್ರಿ

ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ.ರಾತ್ರಿ ಬೇಟೆ ಹುಡುಕುವ ಬಾವಲಿಗಳ ಹಿಂಡು ತಿಂಗಳ ಬೆಳಕಿನಲ್ಲಿ ಗೋಚರಿಸುತಿವೆ.ಈ ವಿದ್ಯಮಾನಗಳು ನಡೆಯುವ ವೇಳೆಯಲ್ಲೇ ಕೆಳಗೆ,ತುಂಬ ಕೆಳಗೆ ಬೆಂಕಿಯ ಜ್ವಾಲೆ ದಗದಗಿಸಿ ಉರಿಯುತ್ತಿದೆ.ಆ ದಗದಗಿಸುವ ಬೆಂಕಿಯ ಬೆಳಕು ಸುತ್ತಲೂ ಕುಳಿತು ಚಳಿ ಕಾಯಿಸುತ್ತಿರುವ ಮಂದಾಯ ಕಣ್ಣುಗಳಲ್ಲಿ ಪ್ರತಿಪಲಿಸುತ್ತಿದೆ.ಅಲ್ಲೆ ಬೆಂಕಿಯ ಒಂದು ಬದ್ದಿಯಲ್ಲಿ ನಾಯಿಯೊಂದು ಮುದುಡಿ ಮಲಗಿದೆ.ಕಾಡುಗತ್ತಲೆಯ ಗರ್ಭದೊಳಗಿಂದ ಜೀರುಂಡೆಗಳ ಜಿರ್ ಜಿರ್ ಸದ್ದು ಸನ್ನಿವೇಶಕ್ಕೆ ಹಿಮ್ಮೇಳವನ್ನು ಒದಗಿಸಿದೆ.ಮಿಂಚುಹುಳುಗಳು ಅಲ್ಲೊಂದು ಇಲ್ಲೊಂದು ಬೆಳಗಿ,ಮಸಿಗತ್ತಲೆಯ ನಡುವೆ ಬೆಳಕಿನ ಕಿಡಿಯನ್ನು ಸೋಕಿಸಿ ಬೆಳಕಿನ ಇರುವಿಕೆಯನ್ನು ಸಾರಿಸಾರಿ ಹೇಳುತಿದೆ.ಕಾನನದ ಯಾವುದೋ ಮೂಲೆಯಲ್ಲಿ ನರಿಯೊಂದು ಊಳಿಡುತ್ತಿದೆ.

ಮಂಗಟ್ಟೆಯ ದೆಸೆಯಿಂದ!

ಮಂಗಟ್ಟೆಹಕ್ಕಿ-ವಿಶೇಷವಾದ ಕೊಕ್ಕಿನಿಂದ,ಕೇಕೆಹಾಕಿ ಕೂಗುವ ದನಿಯಿಂದ,ಅದರ ಅದ್ಬುತವಾದ ಜೀವನಶೈಲಿಯಿಂದ ಕುತೂಹಲಕ್ಕೆ ಕಾರಣವಾದ ಹಕ್ಕಿ.ಮಂಗಟ್ಟೆಹಕ್ಕಿಗಳು ಇರುವಲ್ಲಿ ಜೀವವೈವಿದ್ಯ ಸಮೃದ್ದವಾಗಿರುತ್ತವಂತೆ.ಇವುಗಳು ಸಾಮಾನ್ಯವಾಗಿ ಜೋಡಿ,ಅಥವಾ ಗುಂಪುಗಳಲ್ಲಿ ಕಾಣಸಿಗುತ್ತವೆ.ಬೆಳಗಿನ ಜಾವ ನಮ್ಮ ಮನೆಯ ಪಕ್ಕದ ಗೋಣಿಮರದ ಮೇಲೆ ಕುಳಿತು ಒಂದು ಮಂಗಟ್ಟೆಹಕ್ಕಿ ಕೇಕೆಹಾಕತೊಡಗಿದರೆ,ಸ್ವಲ್ಪ ದೂರದಲ್ಲಿ ಮತ್ತೊಂದು ಮಂಗಟ್ಟೆ ಹಕ್ಕಿ,ಕೇಕೆ ಹಾಕಲು ಪ್ರಾರಂಭಿಸುತ್ತದೆ.ಒಂದರ ನಂತರ ಇನ್ನೊಂದರಂತೆ ಸರದಿಯಲ್ಲಿ ಕೇಕೆ ಹಾಕತೊಡಗುತ್ತವೆ.ಇವುಗಳು ಏನೂ ಸಂಭಾಷಣೆ ನಡೆಸುತ್ತಿರುತ್ತವೋ ಏನೋ.ಮಂಗಟ್ಟೆಯ ದನಿಯಂತೂ ತುಂಬ ದೂರದವರೆಗೂ ಕೇಳಿಸುತ್ತದೆ.ಇವುಗಳ ಸಂಭಾಷಣೆಗೆ ಹಿಮ್ಮೇಳವನ್ನು ನೀಡಲೆನ್ನೂವಂತೆ,ಕಾಡುಕೋಳಿಗಳು ಸಹ ಕೂಗತೊಡಗುತ್ತವೆ.ಮನೆಯ ಹಿಂದಿನ ಗೊಬ್ಬರದ ಗುಂಡಿಯ ಬಳಿ ಕೆದಕುತ್ತಿದೆ ಸಾಕುಕೋಳಿಗಳು ಗಾಬರಿಗೊಂಡು ಅರಚತೊಡಗುತ್ತದೆ.ನೋಡನೋಡುತ್ತಿದಂತೇ ಪರಿಸರ ಗಾಬರಿ-ಗದ್ದಲಗಳಿಂದ ತುಂಬಿ ಹೋಗುತ್ತವೆ.

ಶುಕ್ರವಾರ, ಮಾರ್ಚ್ 18, 2011

ಹೇಗೋ ಏನೋ ಇದೇ ನಾನು

ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ. ನೀನು ಯಾವ ಮಾಯದಲ್ಲಿ ಮನವ ಸೇರಿದೆ. ಬದುಕು ತಾನು ಸಾಗುತಿತ್ತು ಅದರ ಪಾಡಿಗೆ. ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ. ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ. ವಶವ ಮಾಡಿಕೊಂಡೆಯಲ್ಲ ಕರುಣೆ ತೊರದೆ. ನನ್ನ ಬಾಳ ಒಲುಮೆ ನೀನು, ನನ್ನ ಭಾವ ಚಿಲುಮೆ ನೀನು. ಹೇಳು ನೀನು ಯಾರು ನಾನು ತಿಳಿಯದಾಗಿದೇ. ಹೂವ ತುಟಿಯ ಜೇನಿನಂಥೆ. ಮುದ್ದೂಮಗುವ ನಗುವಿನಂತೆ ಬಂದೇ ಬಾಳಿಗೆ, ಹೇಗೊ ಏನೋ ಇದೇ ನಾನು ನನ್ನ ಪಾಡಿಗೆ. ಕಡೆಗೆ ಕಾವ್ಯಸ್ಪೂರ್ತಿಯಾದೆ ಕಾವ್ಯಕನ್ನಿಕೆ.

ಕವಿಯು-ಚೆಲುವು

ವನಸಿರಿಯ ಚೆಲುವ ಸವಿದು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು ಕವಿಯು ಬರೆದ ಕವಿತೆಯ. ಮಧುವ ಹೀರೋ ದುಂಬಿ ಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿ ಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ ಜಗವ ಸವಿಯೋ ಎನುತ್ತ ಹೆಸರ ಹೇಳದೇನೇ ಹೊರಟುಹೋದನು. ಕವಿತೆಯನ್ನ ತೊದಲಿ ಓದಿ, ಮತ್ತೆಮತ್ತೆ ಹಾಡಿಪಾಡಿ, ಅರ್ಥ ಅರಿಯೇ ಕವಿತೆ ಕಾಡಿ,ಎಂಥ ಅದ್ಬುತ!. ಹೊರಟುಹೋದ ಕವಿಯು ಬಂದ. ಹೃದಯದೊಳಗೆ ಬಂದು ನಿಂತ. ಸುಮದೊಳೀಗ ಎಷ್ಟು ಬಣ್ಣ. ಹೊಂಗೆ ನೆರಳು ಎನಿತು ಚೆನ್ನ. ಕವಿಯು ತಾನು ಜಗವ ಕಂಡು ಕವಿತೆ ಗೀಚಿದ. ನಾನು ಕವಿತೆ ಓದಿಕೊಂಡು ಜಗವ ಕಂಡೆನು.

ಗುರುವಾರ, ಫೆಬ್ರವರಿ 24, 2011

ಕವಿಯು-ಚೆಲುವು

ವನಸಿರಿಯ ಚೆಲುವ ಕಂಡು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು, ಕವಿಯು ಬರೆದ ಕವಿತೆಯ. ಮಧುವ ಹೀರುವ ದುಃಬಿಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ ಜಗವ ಸವಿಯೇ ಎನುತ್ತಾ ಹೆಸರ ಹೇಳದೇನೇ ಹೊರಟು ಹೋದನು. ಕವಿತೆಯನ್ನು ತೊದಲಿ ಓದಿ, ಮತ್ತೆಮತ್ತೆ,ಹಾಡಿ-ಪಾಡಿ, ಅರ್ಥಕಾಡೇ,ಎಂಥ ಅದ್ಬುತ!, ಹೊರಟುಹೋದ ಕವಿಯು ಬಂದ, ಹೃದಯದೊಳಗೆ ಬಂದು ನಿಂದ. ಸುಮದೊಳೀಗ ಎಷ್ಟು ಬಣ್ಣ, ಹೊಂಗೆ ನೆರಳು ಎನಿತು ಚೆನ್ನ. ಕವಿಯು ತಾನು ಜಗವ ಕಂಡು ಕವಿತೆ ಗೀಚಿದ. ನಾನು ಕವಿತೆ ಓದಿಕೊಂಡು ಜಗವ ಕಂಡೆನು.
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere

ಭಾಗ್ಯವೆಂದರೇ ನಿನ್ನದೇ ಬಿಡು

ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ತೋಟದಿಂದ ತೋಟಕ್ಕೆ, ಮರದಿಂದ ಮರಕ್ಕೆ, ಕೊಂಬೆಯಿಂದ ಕೊಂಬೆಗೆ ಹಾರಿ, ಬಗೆಬಗೆಯ ಹೂಮಕರಂಧವ ಹೀರಿ, ಅಡೆತಡೆಯಿಲ್ಲದೇ ಏರಿಳಿಯುವ; ಭಾಗ್ಯವೆಂದರೇ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೇ ಇಲ್ಲದೇ, ಜಾತಿ ಧರ್ಮದ ಗೊಡವೆಯೇ ಇಲ್ಲದ ಭಾಗ್ಯವೆಂದರೇ ನಿನ್ನದೆ ಬಿಡು.

ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿ!

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ,ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರೂ ಸಹ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ರಾಜಕಾರಣಿಗಳು,ಹಿಂದೆ ನಡೆದ ಹಗರಣಗಳತ್ತ ಬೊಟ್ಟು ಮಾಡಿ,ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಹೆಗ್ಗಣವಲ್ಲ ಎಂದು ನಂಬಿಸಲು ಹೊರಟಿದ್ದಾರೆ.ಇವರೇನ್ನೂ ಜನಗಳನ್ನು ಮೂರ್ಖರೆಂದು ತಿಳಿದಿದ್ದಾರೆಯೇ?.ಕಣ್ಣಮುಂದೆಯೇ ಅನ್ಯಾಯ ತಂಡಾವವಾಡುತ್ತಿದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಸಾಮಾನ್ಯನಿದ್ದರೆ, ನಾಡಿನ ರಕ್ಷಣೆಗೆ ಮುಂದಾಗುವ ಪ್ರಾಮಾಣಿಕ ನಾಯಕರ ಕೊರತೆ ಮತ್ತೊಂದೆಡೆ.ಈ ಸಂದರ್ಭದಲ್ಲಿ ಬುದ್ದಿಜೀವಿಗಳು,ಕನ್ನಡ ಹೋರಾಟಗಾರರು,ಮೌನವಹಿಸಿರುವುದು ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳುವಂತೇ ಮಾಡಿದೆ.ಜನರು ತಮ್ಮ ಪ್ರಜಾಶಕ್ತಿಯನ್ನು ಅರಿತು ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವ ಅಗತ್ಯವಿದೆ.

ಶುಕ್ರವಾರ, ಜನವರಿ 28, 2011

ನವಚೈತನ್ಯ ಗಾನ

ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ,
ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ,
ಶ್ರಮಜೀವಿಗೂ ಕೂಡ ಬಂತು ಆಕಳಿಕೆ,
ಜಗವೆಲ್ಲ ಆಗಿಹುದು ಅಗೋಚರದ ವಶಕೆ.

ಈಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ
ಮೋಡ ಚದುರಿತು ಬಿಟ್ಟು ಬಿಗುಮಾನ.
ಧರೆಗಿಳಿಯಿತು ಹೊಸ ಹುರುಪಿನ ರವಿಕಿರಣ
ಮೈಮನದರಲಿ ಎಂಥದೋ ಸಂಚಲನ.

ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ.
ಇನ್ನೂ ನಿಂತೇ ಇಹಿರೇನು?
ಕೇಳಲಿಲ್ಲವೇ ನಿಮಗೆ ನವಚೈತನ್ಯದ ಗಾನ.

ಕವಿ

ಏಳುಬೀಳಿನ ಬದುಕ ಕಥೆಯಾಗಿ ಚಿತ್ರಿಸುವವನು.
ಕಥೆಯನ್ನೆ ಬದುಕಾಗಿಸಿಕೊಂಡವನು.
ವಾಸ್ತವವ ಕಲ್ಪಿಸಿಕೊಳ್ಳುವವನು.

ಕಲ್ಪನೆಯ ವಾಸ್ತವಿಕರಿಸುವನು.
ತನ್ನ ಭಾವಗಳ ಜಗಕ್ಕೆ ಹಂಚುವನು.
ಜಗದ ಭಾವನೆಯ ತನ್ನದೆಂದುಕೊಂಡವನು.

ಏಕಾಂತ ಮೌನದಲಿ ನಿತ್ಯ ವಿಹರಿಸುವನು.
ಭಾವಗಳ ಜೊತೆಗೂಡಿ ಹರಟೆ ಹೊಡೆಯುವನು.
ಅಲೆವ ಭಾವನೆಗೆ ರೂಪ ಕೊಟ್ಟವನು.

ನಿದ್ರೆಯಲ್ಲಿ ಮೈಮರೆತು ಮಲಗಿದ್ದರೇನಂತೆ,
ಕವಿಯೊಳಗಿನ ಕವಿ ಮಾತ್ರ ಎಚ್ಚರವೇ ಇರುವನು.

ಭಾನುವಾರ, ಜನವರಿ 23, 2011

image

ಒಂದು ಮಧ್ಯರಾತ್ರಿ

ಮಧ್ಯರಾತ್ರಿ ಗಾಡನಿದ್ರೆಯಲ್ಲಿದವನಿಗೆ ದಿಡೀರನೇ ಎಚ್ಚರವಾಯಿತು.ಕೆಟ್ಟಕನಸು-ಮೈಎಲ್ಲಾ ಬೆವರು.ಮಲ್ಲಗೆ ನಿದ್ದೆಗಣ್ಣನ್ನು ತೆರೆದೆ.ಸುತ್ತಲ್ಲೂ ಗಾಡಾಂಧಕಾರ,ಸೊಳ್ಳೆಗಳ ಗುಂಯ್ ನಿನಾಧ.ಚಾರ್ಜಿಗೆ ಇಟ್ಟ ಮೊಬೈಲ್ ಚಾರ್ಜರಿನ ಕೆಂಪು ದೀಪದ ಬೆಳಕು ಮಂದವಾಗಿ ಬೆಳಗುತ್ತಿದ್ದೆ.ಗಡಿಯಾರದ ಟಿಕ್ ಟಿಕ್ ಶಬ್ಧ,ನಾನಿನ್ನೂ ನಿದ್ರಿಸಿಲ್ಲ ಎಂದು ಸಾರುತ್ತಿದೆ.ಸರಿಯಾಗಿ ನಲ್ಲಿ ತಿರುಗಿಸಲ್ಲವೋ ಏನೋ,ಬಚ್ಚಲಿನ ನಲ್ಲಿಯಿಂದ ನೀರು ತೊಟ್ಟುಕುತ್ತಿರುವ ಕೇಳಿ ಬರುತ್ತಿದೆ.ನಾನು ಇನ್ನೂ ಕಾರ್ಯನಿರ್ವಹಿಸುತ್ತಿದ್ದೆನೆ ಎಂದು ಸೊಳ್ಳೆಬತ್ತಿಯು ತನ್ನ ದೂಮ ಮತ್ತು ಕೆಂಪಗಿನ ಕಿಡಿಯನ್ನು ಸಾಕ್ಷಿಯನ್ನು ದೃಷ್ಟಿಗಮ್ಯವಾಗಿಸಿದೆ.ದೂರದಲ್ಲೆಲೋ ಬೀದಿ ನಾಯಿಗಳ ಬೊಗಳುವಿಕೆ ಅಸ್ಪಷ್ಟವಾಗಿ ಕೇಳಿಸುತ್ತಿದೆ.ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಓಡಾಡುತ್ತಿವೆ.ಬೀದಿದೀಪದ ಬೆಳಕು ವಾಹನದ ಗಾಜಿಗೇ ಬಿದ್ದು ಪ್ರತಿಫಲಿಸಿ,ಮನೆಯ ಗೋಡೆಗಳ ಮೇಲೆ ಬೆಳಕು ಬೀಳುತ್ತಿದೆ.ಕಿಟಕಿಯಿಂದ ತಣ್ಣನೆಯ ಗಾಳಿ ಬೀಸಿ ಒಂದು ಕ್ಷಣ ಮೈ ಥರಗುಟ್ಟಿತು.ಹೊದಿಕೆಯನ್ನು ಎಳೆದು ಮುದುಡಿಕೊಂಡು ಕಣ್ಣುಮುಚ್ಚಿದೆ.ನಿದ್ರೆ ಯಾವಾಗ ಆವರಿಸಿತ್ತೋ ತಿಳಿಯಲಿಲ್ಲ.ಬೆಳಿಗ್ಗೆ ಕಣ್ಣು ಬಿಟ್ಟಾಗ ರಾತ್ರಿ ಕಂಡ ದೃಶ್ಯಾವಳಿಗಳು ಕತ್ತಲೆಯೊಂದಿಗೆ ಕರಗಿಹೋದವು

ಓದಿ ನೋಡಿ

'ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರು ಸಂತಸದಿಂದಿರಬಲ್ಲ.' 'ಓದು ಮನುಷ್ಯನಾಗಿ ಮಾಡಿದರೆ,ಬರವಣಿಗೆ ಅವನನ್ನು ಪರಿಪೂರ್ಣನಾಗಿ ಮಾಡುತ್ತದೆ.' ಮೇಲಿನ ಮಹನೀಯರ ನುಡಿರತ್ನಗಳನ್ನು ಕೇಳಿ ನಿಮಗೂ ಪುಸ್ತಕವನ್ನು ಓದಬೇಕು ಎನಿಸಿರಬೇಕು.ಅಥವಾ ನೀವು ಸಹ ಪುಸ್ತಕಪ್ರೇಮಿ ಯಾಗಿರಬಹುದು.ನೀವು ಓದಿದ್ದ ಯಾವುದೋ ಪುಸ್ತಕ ತುಂಬ ಇಷ್ಟವಾಗಿರಬಹುದು.ಆ ಪುಸ್ತಕದ ಬಗ್ಗೆ ನಿಮ್ಮ ಗೆಳೆಯರಿಗೆ ಹೇಳಿ,ಓದಲು ಕೊಟ್ಟಿರಬಹುದು.ಅಥವಾ ಹೇಳಿರಬಹುದು.ಇಲ್ಲಿ ನಾನು ಓದಿ ಇಷ್ಟಪಟ್ಟು ಗೆಳೆಯರಿಗೆ ಓದಲು ಹೇಳಿದ ಪುಸ್ತಕಗಳ ಹೆಸರುಗಳನ್ನು ಕೊಟ್ಟಿದ್ದೇನೆ.ಇವುಗಳಲ್ಲಿ ನೀವು ಓದಿರುವ ಪುಸ್ತಕಗಳು ಇರಬಹುದು.ನೀವು ಓದಿದ್ದ,ಇಷ್ಟಪಟ್ಟ ಪುಸ್ತಕಗಳ ಬಗ್ಗೆ ಹಂಚಿಕೊಳ್ಳಬಹುದು. ಕುವೆಂಪು: ಕಾನೂರು ಹೆಗ್ಗಡತಿ. ಮಲೆಗಳಲ್ಲಿ ಮದುಮಗಳು. ನೆನಪಿನ ದೋಣಿಯಲ್ಲಿ. ಸ್ವಾಮಿ ವಿವೇಕಾನಂದ. ಮಲೆನಾಡಿನ ಚಿತ್ರಗಳು. ಕಥನ ಕವನಗಳು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ: ಕರ್ವಾಲೋ, ಚಿದಂಬರ ರಹಸ್ಯ. ಜುಗಾರಿ ಕ್ರಾಸ್. ಕಿರಗೂರಿನ ಗಯ್ಯಾಳಿಗಳು. ಅಬಚೂರಿನ ಪೋಸ್ಟಾಪೀಸು. ಮಾಯಾಲೋಕ. ಮಿಸ್ಸಿಂಗ್ ಲಿಂಕ್. ಪಾಕಕ್ರಾಂತಿ ಮತ್ತು ಇತರ ಕಥೆಗಳು. ವಿಮರ್ಶೆಯ ವಿಮರ್ಶೆ. ಪ್ಲೇಯಿಂಗ್ ಸಾಸರ್. ಪರಿಸರದ ಕಥೆ. ತಾ.ರಾ.ಸು: ದುರ್ಗಾಸ್ತಮಾನ. ರಕ್ತರಾತ್ರಿ. ತಿರುಗುಬಾಣ. ಕಸ್ತೂರಿಕಂಕಣ. ಚಂದವಳ್ಳಿಯ ತೋಟ. ಹಿಂತಿರುಗಿ ನೋಡಿದಾಗ. ಗಿರಿಮಲ್ಲಿಗೆ. ಮರಳುಸೇತುವೆ. ನಾಗರಹಾವು. ಕಂಬನಿಯ ಕುಯಿಲು. ಹೊಸಹಗಲು. ವಿಜಯೋತ್ಸವ. ತ.ರಾ.ಸುರವರ ಸಮಗ್ರ ಕಥೆಗಳು. ಯು.ಆರ್.ಅನಂತಮೂರ್ತಿ: ಸಂಸ್ಕಾರ. ಶಿವರಾಮ ಕಾರಂತ: ಮೂಕಜ್ಜಿಯ ಕನಸು

ಶನಿವಾರ, ಜನವರಿ 22, 2011

ಚಿತ್ರ-ಕವನ

ಒಂದು ಒಣಗಿದ್ದ ಮರ.ಅದರ ಪಕ್ಕದಲ್ಲಿ ಎತ್ತುಗಳಿಲ್ಲದ ಗಾಡಿ.ಹಿಂಬದಿಯಲ್ಲಿ ಕೆರೆ.ಅದರ ಆ ತೀರದಲ್ಲಿ ದಟ್ಟ ಕಾನನ.ಮೇಲೆ ಶುಭ್ರ ನೀಲಾಕಾಶ.ಒಣಮರದ ಸುತ್ತಲ್ಲೂ ಒಣಗಿದ್ದ ಗಿಡಗಂಟಿಗಳು:ಈ ಚಿತ್ರವನ್ನು ನೋಡಿ ರಚಿಸಿದ ಕವನ ಈ ಕೆಳಗಿನದು: ಒಣಮರಕ್ಕೆ ಆಗಿದೆ ನೀರಡಿಕೆ. ಹಿನ್ನಲೆಯಲ್ಲಿ ಇದೆ ನೀರ ಒರತೆ. ತುರ್ತಾಗಿ ಸಿಗಬೇಕಾಗಿದೆ ಮರಕ್ಕೆ ಚಲನೆ; ಅಥವಾ ಇರಲೇಬೇಕು ಅಪಾರ ಸಹನೆ. ನೀರು ಏರಿ ಬಾನ ಸೇರಿ ಮತ್ತೆ ಜಾರಿ ಭುವಿಯ ಸೇರೋವರೆಗಿನ ತಾಳ್ಮೆ. ಎತ್ತಿಲ್ಲದ ಗಾಡಿಯು ತಂದಿದೇ ಚಲನೆಯ ಚಪಲ. ಆಚೆ ತೀರದ ಹಸಿರು ಕೆಡಿಸಿದೇ ತಾಳ್ಮೆ. ಗಾಡಿ ಚಲನೆ ಕಳೆದು ಮೂಲೆ ಸೇರಿದೆ. ನಿಂತ ಮರವೂ ಚಲನೆಗಾಗಿ ಕೊರಗೆ ಕೊರಗಿದೆ. ಎತ್ತಿನಗಾಡಿಗೆ ಬರಲಿ ಜೋಡಿಎತ್ತು, ಕೊರಳಗಂಟೆಯ ಸದ್ದು ತರಲಿ ಮರುಜೀವ. ಬೇಗ ಬಾರಯ್ಯ ವರುಣ, ಇರಲಿ ಜೀವದ ಮೇಲೆ ಕರುಣ

ತೋಚಿದ್ದು-ಗೀಚಿದ್ದು

ಬರಸಿಡಿಲೇ ಬಡಿಯಲಿ ಬಿರುಮಳೆಯೇ ಸುರಿಯಲಿ. ಅಗ್ನಿದೇವ ರುದ್ರನಾಗಿ ಅಗ್ನಿವೃಷ್ಟಿ ಸುರಿಸಲಿ. ಸಪ್ತಸಾಗರವೇ ಕದಡಿ ಕೆರಳಿ, ಲೋಕವೆಲ್ಲ ಮುಳುಗಲಿ, ಜಗವೇ ಕೆರಳಿ ಏನೇ ಬರಲಿ ದಿಟ್ಟಗುರಿಯು ನಿನ್ನದಾಗಲಿ

ಪೂರ್ಣಚಂದ್ರ ಮತ್ತು ಗಂಧರ್ವನಗರಿ

ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ ಬಳಿಯಿಂದ ಕೇಳಿ ಬರುತ್ತಿರುವ ಗಜಿಬಿಜಿ ಮಾತುಗಳು.ಅಬ್ಪಾ ಇದೇನು ಗಂದರ್ವಲೋಕವೇ ಧರೆಗಿಳಿದಂತಿದೆಯಲ್ಲ.ಅಗೋ! ಅಲ್ಲಿ ದೂರದ ಮಂಟಪ ಮಿಣುಕುದೀಪಗಳಿಂದ ಜಗಮಗಿಸುತ್ತಿದೆ.ಹಸಿರು,ಕೆಂಪು,ನೀಲಿ,ಹಳದಿ ಇನ್ನೂ ಹಲವಾರು ತರತರದ ಬಣ್ಣಗಳು.ಹೌದು! ಇದು ಬಣ್ಣಗಳದೇ ಲೋಕ.ಅಯ್ಯೋ ಇದೇನಾಯ್ತು?. ಇಡೀ ನಗರವೇ ಕರಗಿಹೋದಂತೆ ತೋರುತ್ತಿದೆಯಲ್ಲ.ಹೌದು ಇಲ್ಲಿ ಎಲ್ಲವೂ ಕೃತಕ.ಕ್ಷಣಿಕವೂ ಕೂಡ.ಒಂದು ಕ್ಷಣ ವಿದ್ಯುತ್ ಕೈಕೊಟ್ಟರೂ ಇಲ್ಲಿಯ ಬದುಕೇ ತಟಸ್ಥವಾದಂತೇ.ಒಂದು ನಿಮಿಷದ ಹಿಂದೆ ಕಂಡ ಸೊಬಗು ಹೀಗೆಲ್ಲಿ ಕರಗಿಹೋಯಿತು.ಅಥವಾ ಇದು ಬರೀ ಕನಸೇ? ಇರಲಾರದು.ಹೋ ಅದೋ ಆಗಸದಿ ಆ ಚಂದ್ರ ಅದೆಷ್ಟು ತೇಜೋಮಯನಾಗಿದ್ದಾನೆ.ಅರೇ ಚುಕ್ಕಿಗಳು!ಇಷ್ಟುಹೊತ್ತು ಇವೆಲ್ಲಿದವು?.ಅಥವಾ ಇದೂ ಸಹ ಕನಸೇ ಇರಲಿಕ್ಕಿಲ್ಲ.ಆದರೆ ಆ ಚಂದ್ರ ಈ ಕೃತಕ ಗಂದರ್ವನಗರಿಗಿಂತ ಸುಂದರ,ಸಹಜ.ಇಷ್ಟು ದಿನ ನಾನೇಕೆ ಈ ಸೊಬಗನ್ನು ಕಾಣಲಿಲ್ಲ?.ಆಸ್ವಾದಿಸಲಿಲ್ಲ?.ಅದೋ! ಶಶಿಯ ಬೆಳದಿಂಗಳಲ್ಲಿ ನಗರ ಅದೆಷ್ಟು ಮನೋಹರವಾಗಿ ಗೋಚರಿಸುತ್ತಿದೆ.ಅಯ್ಯೋ ಇದೆನಾಯ್ತು ವಿದ್ಯುತ್ ಬಂದೇ ಬಿಟ್ಟಿತ್ತಲ್ಲ.ಅದಕ್ಕೇನು ಅವಸರವಿತ್ತು?

ಓ ದೇವ ನೀ ಬೇಗ ಬಾ

ಮಣ್ಣಾಟವಾಡುವ ಕಂದನ ಕಂಡು
ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,
ತಿದ್ದಿ ನೆಡೆಸಲು
ಓ ದೇವ ನೀ ಬೇಗ ಬಾ

ಪ್ರಾಣ ಹಿಂಡುವ ಮಂದಿ
ರಕ್ತ ಹೀರುವ ಮಂದಿ
ಎಲ್ಲ ಮಂದಿಯ ಮನದಿ
ಮಾನವೀಯತೆಯ ಕಿಡಿಯ ನೀ ಹಚ್ಚು ಬಾ
ಓ ದೇವ ನೀ ಬೇಗ ಬಾ

ಅಂದು ಭಕ್ತಿ ಮಾರ್ಗದಿ ನಿನ್ನ
ನಾಮ ಸ್ಮರಣೆಯ ಮಾಡಿ
ಮುಕ್ತಿ ತೋರೋ ಎಂದು ಭಜಿಸುತಲಿರೇ
ಇಂದು ಜಾತಿ,ಪಕ್ಷವು ನಿನ್ನ
ನಾಮವನೇಳಿ ಸರ್ವನನ್ನು ಅಲ್ಪನಾಗಿಸುತಿಹರು.

ಹೆಸರೊಂದೆ ಸಾಕೀಗ,ಭಕ್ತಿಗಿಲ್ಲವೋ ಜಾಗ
ಎಂಬ ಹುಂಬರೆದೆಯಲ್ಲಿ
ಭಕ್ತಿಜ್ಯೋತಿಯ ಹಚ್ಚಲು
ಓ ದೇವ ನೀ ಬೇಗ ಬಾ

ನಿನ್ನಯ ಕಂದರು ನಾವೆಲ್ಲ
ಕುರುಡರಂದದ್ದಿ ನಿನ್ನ ಹುಡುಕುತಿರುವೆವಲ್ಲ.
ನೀ ಬರಲು ಪ್ರಶ್ನೆಗಳೇ ಇಲ್ಲ.
ಆಸ್ತಿಕರ ನಾಸ್ತಿಕರ ಜಗಳವದು ನಿಂತಿಲ್ಲ.
ಆದಷ್ಟು ಬೇಗ ನೀ ಬರಬೇಕಲ್ಲ.
ಓ ದೇವ ನೀ ಬೇಗ ಬಾ.

ಬಾವಿಯೊಳಗಿನ ಕಪ್ಪೆಯ ರೀತಿ
ನಮ್ಮ ವ್ಯಾಪ್ತಿಯಲ್ಲಿ ನಿನ್ನ ಹುಡುಕುತಿರುವೆವು.
ಹಲವು ಗೊಂದಲದ ನಡುವೆ
ಬಾಳುತಿರುವ ಮಂದಿಯ ಮುಂದೊಮ್ಮೆ ನೀ ನಿಲ್ಲು ಬಾ.

ಭಕ್ತಿಯು ಹಣವಾಗಿ,ಪ್ರೀತಿಯು ಹಣವಾಗಿ
ಅಕ್ಷರವ ಹಣವಾಗಿ ಕಾಣುವ ಜನರ
ಸರಿದಾರಿಯಲ್ಲಿ ನಡೆಸು ಬಾ
ಓ ದೇವ ನೀ ಬೇಗ ಬಾ

ಗತಿಗೆಟ್ಟವರು ಇಲ್ಲಿ ಹಲವಾರು ಮಂದಿ
ಉಳ್ಳವರ ದರ್ಪಕ್ಕೆ ಅವರೆಲ್ಲ ಬಂದಿ
ಎಲ್ಲರುದಾರಕ್ಕೆ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ವಿಜ್ಞಾನದ ಆವೇಗದಲ್ಲಿ ಯಂತ್ರಗಳ ಸಂತೆ
ಬದುಕಾಗಿದೆ ಇಲ್ಲಿ ನಿರ್ಜೀವ ಯಂತ್ರದಂತೆ
ಎಲ್ಲವೂ ಜಡವಾಗಿ ತೋರುತಿರೇ
ಜೀವಸ್ಪರ್ಶವ ನೀಡೇ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ಹೇಮಾವತಿ

ಹೊಂಬಿಸಿಲ ಹೊಳಪಲಿ ಜುಳುನಾದದ ಜೊಂಪಲಿ ತುಂಬಿ ಹರಿವಳು ನುಣ್ಣಗೆ ಮಲೆಯ ಮೇಲ್ಗಡೆ ಬೀಸುಗಾಳಿಯು ತಣ್ಣಗೆ ದಡದ ಸಂಪಿಗೆ,ಗಂಧ ಕಂಪಿಗೆ,ದುಂಬಿಗಾನದ ಇಂಪಿದೆ ಮಲೆಯ ಮಕ್ಕಳ ನೀರ ಆಟ ಬಟ್ಟೆ ಒಗೆಯುವ ಹೆಂಗಳೆಯರ ಕೂಟದ ನಗುವು ಎಲ್ಲೆಡೆ ಪ್ರತಿಫರಿಸಿದೆ. ಗಾಳವಿಕ್ಕಿ ಕಾದು ಕುಳಿತ ದನಗಾಯಿಯ ಮೊಗದಲಿ ತತ್ವಜ್ಞಾನಿಯ ಹೊಳಪಿದೆ.

ಅ'ಗಣಿತ'

ಎಣಿಸುವುದು ಗಣಿತ ಎಣಿಸಲಾಗದು ಅಗಣಿತ

ಶುಕ್ರವಾರ, ಜನವರಿ 21, 2011

ಕವನ:ಕವಿಗಾಗಿ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ, ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ. ಮೂಗ ಸೆಳೆವ ಹೂ ಸುಗಂಧ ಕವಿಗಾಗಿ.ಜಗವ ಮರೆಸೋ ಜೇನ ಸವಿಯು ಕವಿಗಾಗಿ. ತಂಪ ನೀವ ತಂಗಾಳಿಯ ಸ್ಪರ್ಶ ಕವಿಗಾಗಿ. ಮನ ತಣಿಸುವ ಸೋನೇಮಳೆಯು ಕವಿಗಾಗಿ. ಕವಿಯಿಂದಲೇ ಜಗದಿ ಮಳೆಯು ಕವಿಯಿಂದಲೇ ಜಗದಿ ಬೆಳೆಯು ಕವಿಯಿದ್ದರೆ ಜಗಕ್ಕೆ ಬೆಳೆಯು, ಕವಿಯಿದ್ದರೆ ಜಗಕ್ಕೆ ಬೆಲೆಯು. -ನಂದೀಶ್ ಬಂಕೇನಹಳ್ಳಿ

ಕವನ:ಬಾ ಮಲೆನಾಡಿಗೆ




ಬಾ ಮಲೆನಾಡಿನ ಸಿರಿ ದರ್ಶನಕ್ಕೆ,
ರವಿ ಏರುವ,ಮಂಜಾರುವ,

ಹೂ ಬಿರಿಯುವ ಶುಭಕಾಲಕ್ಕೆ.
ಕೋಗಿಲೆ ಇಂಚರ,ನಾಟ್ಯಮನೋಹರ-

ನವಿಲಾಟದ ಸುಂದರ ನೋಟಕ್ಕೆ.
ತೆನೆ ತೂಗುವ,ತೊರೆ ಜಾರುವ
ಜುಳುನಾದದ ಸವಿರಾಗಕ್ಕೆ.

ಸಿಹಿಜೇನಿದೆ,ಸವಿ ಫಲವಿದೆ,
ಬಾ ಸ್ವೀಕರಿಸು ಓ ಅಥಿತಿಯೇ!

ಕಾಫಿಯ ಕಂಪಿದೆ,ಹೊಂಗೆಯ ತಂಪಿದೆ,
ಬಾ ಬೆಟ್ಟದ ಪೇಯದಾಸ್ವದಕ್ಕೆ.
ಬಾ ಮಲೆನಾಡಿನ ಸಿರಿ ದರ್ಶನಕ್ಕೆ.
-ನಂದೀಶ್ ಬಂಕೇನಹಳ್ಳಿ

ಗುರುವಾರ, ಜನವರಿ 20, 2011

ನವಚೈತನ್ಯದ ಗಾನ

ಮೋಡ ಮುಸುಕಿರೇ ಮಂಕು ಕವಿದಿದೇ ಮನಕೆ ಹುರುಪಿಲ್ಲ ಕಾರ್ಯದಲಿ ಗರಬಡಿದಿಹ ಜಗಕೆ ಇಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ ಧರೆಗಿಳಿಯಿತು ಹೊಸ ಹೊಳಪಿನ ರವಿಕಿರಣ ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ ಬಿಡುವಿಲದ ಜಗವೀಗ ಕೆಲಸ ಕಾರ್ಯದಲಿ ಮಗ್ನ