ಶನಿವಾರ, ಜನವರಿ 22, 2011

ಪೂರ್ಣಚಂದ್ರ ಮತ್ತು ಗಂಧರ್ವನಗರಿ

ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ ಬಳಿಯಿಂದ ಕೇಳಿ ಬರುತ್ತಿರುವ ಗಜಿಬಿಜಿ ಮಾತುಗಳು.ಅಬ್ಪಾ ಇದೇನು ಗಂದರ್ವಲೋಕವೇ ಧರೆಗಿಳಿದಂತಿದೆಯಲ್ಲ.ಅಗೋ! ಅಲ್ಲಿ ದೂರದ ಮಂಟಪ ಮಿಣುಕುದೀಪಗಳಿಂದ ಜಗಮಗಿಸುತ್ತಿದೆ.ಹಸಿರು,ಕೆಂಪು,ನೀಲಿ,ಹಳದಿ ಇನ್ನೂ ಹಲವಾರು ತರತರದ ಬಣ್ಣಗಳು.ಹೌದು! ಇದು ಬಣ್ಣಗಳದೇ ಲೋಕ.ಅಯ್ಯೋ ಇದೇನಾಯ್ತು?. ಇಡೀ ನಗರವೇ ಕರಗಿಹೋದಂತೆ ತೋರುತ್ತಿದೆಯಲ್ಲ.ಹೌದು ಇಲ್ಲಿ ಎಲ್ಲವೂ ಕೃತಕ.ಕ್ಷಣಿಕವೂ ಕೂಡ.ಒಂದು ಕ್ಷಣ ವಿದ್ಯುತ್ ಕೈಕೊಟ್ಟರೂ ಇಲ್ಲಿಯ ಬದುಕೇ ತಟಸ್ಥವಾದಂತೇ.ಒಂದು ನಿಮಿಷದ ಹಿಂದೆ ಕಂಡ ಸೊಬಗು ಹೀಗೆಲ್ಲಿ ಕರಗಿಹೋಯಿತು.ಅಥವಾ ಇದು ಬರೀ ಕನಸೇ? ಇರಲಾರದು.ಹೋ ಅದೋ ಆಗಸದಿ ಆ ಚಂದ್ರ ಅದೆಷ್ಟು ತೇಜೋಮಯನಾಗಿದ್ದಾನೆ.ಅರೇ ಚುಕ್ಕಿಗಳು!ಇಷ್ಟುಹೊತ್ತು ಇವೆಲ್ಲಿದವು?.ಅಥವಾ ಇದೂ ಸಹ ಕನಸೇ ಇರಲಿಕ್ಕಿಲ್ಲ.ಆದರೆ ಆ ಚಂದ್ರ ಈ ಕೃತಕ ಗಂದರ್ವನಗರಿಗಿಂತ ಸುಂದರ,ಸಹಜ.ಇಷ್ಟು ದಿನ ನಾನೇಕೆ ಈ ಸೊಬಗನ್ನು ಕಾಣಲಿಲ್ಲ?.ಆಸ್ವಾದಿಸಲಿಲ್ಲ?.ಅದೋ! ಶಶಿಯ ಬೆಳದಿಂಗಳಲ್ಲಿ ನಗರ ಅದೆಷ್ಟು ಮನೋಹರವಾಗಿ ಗೋಚರಿಸುತ್ತಿದೆ.ಅಯ್ಯೋ ಇದೆನಾಯ್ತು ವಿದ್ಯುತ್ ಬಂದೇ ಬಿಟ್ಟಿತ್ತಲ್ಲ.ಅದಕ್ಕೇನು ಅವಸರವಿತ್ತು?

ಕಾಮೆಂಟ್‌ಗಳಿಲ್ಲ: