ಗುರುವಾರ, ಮೇ 25, 2023

ತೋರಣಮಾವು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ತೋರಣಮಾವು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಮೋಟಮ್ಮ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಭೀಮ್ ಆರ್ಮಿ ಅಧ್ಯಕ್ಷರಾದ ಗಿರೀಶ್ ಅವರು ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ತೋರಣಮಾವು ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯಿತು. 
ಈ ಸಂದರ್ಭದಲ್ಲಿ ತೋರಣಮಾವು ಸಕಿಪ್ರಾ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಲೋಕೇಶ್, ಕೂದುವಳ್ಳಿ ಗ್ರಾ.ಪಂ ಸದಸ್ಯರಾದ ಜ್ಯೋತಿ, ಆಶಾ ಕಾರ್ಯಕರ್ತೆ ನೇತ್ರಾವತಿ, ಹಿರಿಯ ಮುಖಂಡರಾದ ಈರಯ್ಯ, ಲಿಂಗರಾಜು, ಮುಳ್ಳಯ್ಯ, ಉಮೇಶ್, ಶಶಿಕುಮಾರ್, ಲೋಕೇಶ್ ಮುಂತಾದವರು ಇದ್ದರು.

ಮಂಗಳವಾರ, ಮೇ 9, 2023

ಎಸ್‌ಎಸ್‌ಎಲ್‌ಸಿ ಪರೀಕ್ಷೆ:ಮೂಡಿಗೆರೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಈಶ್ವರಿ ಸಿರಿಗಂಧ


ಕೊಟ್ಟಿಗೆಹಾರ:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಣಕಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಈಶ್ವರಿ ಸಿರಿಗಂಧ ೬೧೬ (ಶೇ೯೯) ಅಂಕ ಪಡೆಯುವ ಮೂಲಕ ಮೂಡಿಗೆರೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಫಲ್ಗುಣಿ ಗ್ರಾಮದ ಜಯಪ್ರಕಾಶ್ ಮತ್ತು ಸುಪ್ರಿತಾ ದಂಪತಿಗಳ ಪುತ್ರಿ ಈಶ್ವರಿ ಸಿರಿಗಂಧ, ಕನ್ನಡ ೧೨೪, ಇಂಗ್ಲಿಷ್ ೯೯, ಹಿಂದಿ ೯೮, ಗಣಿತ ೯೯, ವಿಜ್ಞಾನ ೯೭, ಸಮಾಜ ವಿಜ್ಞಾನ ವಿಷಯದಲ್ಲಿ ೯೯ ಅಂಕ ಪಡೆದು ಒಟ್ಟು ೬೧೬ ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಟಾಪರ್ ಎನಿಸಿಕೊಂಡಿದ್ದಾರೆ.
ವಿಧ್ಯಾರ್ಥಿನಿ ಈಶ್ವರಿ ಸಿರಿಗಂಧ ಪೋಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದ್ದು ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ವಿಧ್ಯಾರ್ಥಿನಿ ಈಶ್ವರಿ ಸಿರಿಗಂಧ, ಅಂದು ಮಾಡಿದ ಪಾಠವನ್ನು ಅಂದೇ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿರುವಾಗ ಪುನರಾರ್ವತನೆ ಓದಿಕೊಳ್ಳುತ್ತಿದ್ದೆ. ಕಷ್ಟ ಪಟ್ಟು ಓದುವುದಕ್ಕಿಂದ ಇಷ್ಟ ಪಟ್ಟು ಓದುತ್ತಿದ್ದೆ. ಮನೆಯಲ್ಲಿ ಕೂಡ ಓದಿನ ಬಗ್ಗೆ ಯಾವುದೇ ಒತ್ತಡಗಳಿರಲಿಲ್ಲ. ಪೋಷಕರು, ಶಿಕ್ಷಕರ ಸಹಕಾರದೊಂದಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಐಎಎಸ್ ಮಾಡುವ ಗುರಿ ಇದೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕವನ್ನು ಪಡೆಯಲು ಕಾರಣರಾದ ಪೋಷಕರು ಮತ್ತು ಶಿಕ್ಷಕರಿಗೆ ಧನ್ಯವಾದ ತಿಳಿಸಿಸುತ್ತೇನೆ ಎಂದು ತಿಳಿಸಿದ್ದಾರೆ.

ಶನಿವಾರ, ಮೇ 6, 2023

ಮೂಡಿಗೆರೆಯಲ್ಲಿ ಸಿಪಿಐ ಪಕ್ಷದ ರ‍್ಯಾಲಿ, ಬಹಿರಂಗ ಸಭೆ

ಶ್ರಮಿಕ ವರ್ಗದ ಏಳಿಗೆಗೆ ಸಿಪಿಐ ಪಕ್ಷವನ್ನು ಬೆಂಬಲಿಸಿ, ಸಿಪಿಐ ಅಭ್ಯರ್ಥಿ ಗೆಲ್ಲಿಸಿ

ಮೂಡಿಗೆರೆಯಲ್ಲಿ ಸಿಪಿಐ ಪಕ್ಷದ  ರ‍್ಯಾಲಿ, ಬಹಿರಂಗ ಸಭೆ

ಕೊಟ್ಟಿಗೆಹಾರ:ಶ್ರಮಿಕ, ಶೋಷಿತ ವರ್ಗದ ಏಳಿಗೆಗೆ ಸಿಪಿಐ ಪಕ್ಷವನ್ನು ಬೆಂಬಲಿಸಿ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಬೇಕಿದೆ ಎಂದು ಕೇರಳ ರಾಜ್ಯ ಸಭಾ ಸದಸ್ಯರಾದ ಸಂತೋಷ್‌ಕುಮಾರ್ ಹೇಳಿದರು.
ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಪರ ಮತಯಾಚನೆ, ಬಹಿರಂಗ ಸಭೆ ಮತ್ತು ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿಗೂ ಕೂಡ ಬಹುತೇಕ ಕಾರ್ಮಿಕ ವರ್ಗ ಸ್ವಂತ ಸೂರಿಲ್ಲದೇ ಬದುಕು ನಡೆಸುತ್ತಿದ್ದೆ. ಬಡವರ್ಗದ ಮೂಲಭೂತ ಸವಲತ್ತುಗಳಲ್ಲಿ ಒಂದಾದ ಸ್ವಂತ ಸೂರನ್ನು ಕಲ್ಪಿಸಲು ಬಿಜೆಪಿ ಸರ್ಕಾರ ಸೋತಿದ್ದು ಬಿಜೆಪಿ ಸರ್ಕಾರ ಉಳ್ಳವರ, ಶ್ರೀಮಂತರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಜನತಾ ಪಾರ್ಟಿಯೂ ಬಿಸಿನೆಸ್ ಜನತಾ ಪಾರ್ಟಿಯಾಗಿದೆ. ಬಡವರ್ಗದ ಅಭಿವೃದ್ದಿಗೆ ಸಿಪಿಐ ಪಕ್ಷ ಹಲವಾರು ಹೋರಾಟಗಳನ್ನು ಹಿಂದಿನಿಂದಲೂ ಸಂಘಟಿಸುತ್ತಾ ಬಂದಿದೆ. ಬಡವರ್ಗದ, ಶೋಷಿತ ವರ್ಗದ ಏಳಿಗೆಗೆ ಸಿಪಿಐ ಕಂಕಣಬದ್ದವಾಗಿದೆ ಎಂದರು.
ಸಿಪಿಐ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಸಿದ್ದನಗೌಡ ಪಾಟೀಲ್ ಮಾತನಾಡಿ ದುಡಿಯುವ ಜನರ ಪರವಾಗಿ ಧ್ವನಿ ಎತ್ತದೇ ಇರುವುದರಿಂದ ಬಡವರ ವಿರೋಧಿ ಕಾನೂನುಗಳು ಬರುವಂತಾಗಿದೆ. ಬಡಜನರು ಸೂರು ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡಿಸಲು ಮುಕ್ತ ಭರವಸೆ ನೀಡಿದ್ದ ಬಿಜೆಪಿ ಭರವಸೆಗೆ ಸೀಮಿತವಾಗಿದೆ ಎಂದರು.
ಸಿಪಿಐ ಪಕ್ಷದ ಬ್ಯಾಂಕ್ ಖಾತೆಯಲ್ಲಿ ೨೫ ಸಾವಿರಕ್ಕಿಂತ ಹೆಚ್ಚು ಹಣ ಇಲ್ಲ. ಸಿಪಿಐ ಬಡವರ ಸ್ವಾಭಿಮಾನದ ಪಕ್ಷವಾಗಿದೆ. ಮೂಡಿಗೆರೆ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಅವರು ಬಡತನದ ಹಿನ್ನಲೆಯಿಂದ ಬಂದವರು. ಬಡವರ ಪರವಾದ ಧ್ವನಿಯಾಗಿರುವ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಬೇಕಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು, ಸಿಪಿಐ ಮುಖಂಡರಾದ ಲಕ್ಷö್ಮಣಕುಮಾರ್, ಜ್ಯೋತಿ, ಸಂತೋಷ್, ಗುಣಶೇಖರ್, ಶೇಖರ್, ಅಮ್ಜದ್ ಮುಂತಾದವರು ಇದ್ದರು.