ಬುಧವಾರ, ಏಪ್ರಿಲ್ 18, 2012

nenapina chitragalu,nandish,nandish mudigere
nenapina chitragalu,nandish,nandish mudigere

ಕಥೆ;ಪ್ಯಾಟೆ6

ನಡೆದು ಬರುವುದು ಕಾಣಿಸಿತು.ಮಂಜ ಸಿದ್ದನನ್ನು ನೋಡಿದನೆಂದು ತೋರುತ್ತದೆ.ಅವನು ಬೇಗಬೇಗ ಹೆಜ್ಜೆಹಾಕುತ್ತಾ ಸಿದ್ದನ ಬಳಿಗೆ ಬಂದ.ಸಿದ್ದ ಮಂಜನನ್ನು ಬಿಗಿದಪ್ಪಿ ಕೆನ್ನೆಗೊಂದು ಸಿಹಿಮುತ್ತನಿತ್ತ.ಅರ್ಚಕರಿಗೆ ಕೈಮುಗಿದು ನಮಸ್ಕರಿಸಿದ ಸಿದ್ದ ನಡೆದ ಸಂಗತಿ ಕೇಳಿ ತಿಳಿದುಕೊಂಡ.ಅರ್ಚಕರಿಗೆ ಕೃತಘ್ಞತೆಯನ್ನು ಸಲ್ಲಿಸಿದ ಸಿದ್ದ ಮಂಜನೊಡನೆ ಬಸ್ಸನೇರಿ ಕುಳಿತ.ನಂಜೇಗೌಡರನ್ನು ಈ ಪೇಟೆಯಲ್ಲಿ ಹುಡುಕಿ ಮಂಜ ಮರಳಿಬಂದ ವಿಚಾರ ತಿಳಿಸುವುದು ಕಷ್ಟವಾಗಿತ್ತು.ಹೇಗಿದ್ದರೂ ಬೆಟ್ಟದೂರಿಗೆ ಬರುತ್ತಾರೆ.ಬಂದಾಗ ಹೇಳಿದರೆ ಆಯ್ತೆಂದು ಸಿದ್ದ ನಿರ್ದರಿಸಿದ್ದ.ಚಂದ್ರಿ ತೋಟದ ಕೆಲಸ ಮುಗಿಸಿ ಮನೆ ಮುಟ್ಟುವುದರೊಳಗೆ,ನಾವು ಮನೆ ಮುಟ್ಟಬೇಕೆಂದು ಮನದಲ್ಲೇ ಅಂದುಕೊಂಡ.ಆ ವೇಳೆಗೆ ಪೇಟೆಯನ್ನು ಬಿಟ್ಟ ಬಸ್ಸು ಬೆಟ್ಟದೂರಿನ ಕಡೆಗೆ ಹೊರಟಿತು.

ಕಥೆ;ಪ್ಯಾಟೆ5

'ಚಂದ್ರಿ ನೀನು ಬಾಕಿ ಆಳಿನ ಜೊತಿಗೆ ತೋಟುಕ್ಕೆ ಹೋಗಿರು,ಸಿದ್ದುಂಗೇ ಮನೆತವ ಸ್ವಲ್ಪ ಕೆಲಸ ಅದೆ' ಎಂದರು.ನಡೆದದೇನು ತಿಳಾಯದ ಚಂದ್ರಿ ಮಂಜನನ್ನು ಬಂಗಲೆಗೆ ಹಾಲು ತರಲು ಕಳಿಸಿರಬೇಕೆಂದು ಅಂದುಕೊಂಡು ಹೆಣ್ಣಾಳಿನ ಜೊತೆ ತೋಟಕ್ಕೇ ಹೋದಳು.ಇತ್ತ ಸಿದ್ದ 'ಗೌಡ್ರೇ ಮಂಜ ಎಲ್ಲಿ?.ಹಾಲ್ ತರಕೆ ಕಳ್ಸೀರಾ?'ಎಂದು ಕೇಳಿದ.ಅದಕ್ಕೆ ನಂಜೇಗೌಡರು ತಡವರಿಸಿದರು.ಅಳುಕಿನಿಂದಲೇ 'ಲೋ ಸಿದ್ದ ಏನಂಥ ಹೇಳ್ಲೋ,ನಿನ್ನೇ ಪ್ಯಾಟಿಗೆ ಹೋದ ಮೇಲೆ ಅಲ್ಲಿ ಕ್ಯಾಂಟಿನ್ ತವ ಕೂರ್ಸಿ,ಎಲ್ಲೂ ಹೋಗಬೇಡ ಅಂತ ಹೇಳಿ ಡಿಸೇಲ್ ತರಕ್ಕೆ ಅಂಥ ಹೋದನಾ.ಬಂದು ನೊಡ್ತೀನಿ,ಮಂಜ ಇಲ್ಲ.ನನಗೆ ಗಾಬರಿಯಾಗಿ ಇಡೀ ಪ್ಯಾಟಿಯೆಲ್ಲ ಹುಡ್ಕಿದ್ರುವೇ ಕಾಣ್ಸಿಸ್ಲಿಲ್ಲ ಕಣಾ,ಏನ್ ಮಾಡಕ್ಕೂ ತೋಚದೇ ಅಂಗೇ ಬಂದುಬುಟ್ಟೆ.ಚಂದ್ರಿ ತವ ಹೇಳಕ್ಕೇ ದೈರ್ಯ ಸಾಲ್ಲಿಲ್ಲ.ಅದುಕ್ಕೆ ತೋಟಕ್ಕೆ ಕಳ್ಸಿ ನಿನಗೆ ಹೇಳಿದು' ಎಂದು ಒಂದು ದೀರ್ಘ ನಿಟ್ಟುಸಿರು ಬಿಟ್ಟರು.ಸಿದ್ದ 'ಏನ್ ಗೌಡ್ರೇ ಹಿಂಗ್ ಹೇಳಬುಟ್ರಿ,ಚಂದ್ರಿಗೇನಾರ ಗೊತ್ತಾಗುಬುಟ್ರೆ ಅಷ್ಟೇಯಾ?.ಮಂಜ ಪ್ಯಾಟೆ ಗೀಟೆಗೆಲ್ಲ ಹೋದೋನೆ ಅಲ್ಲ.ಗೌಡ್ರೇ, ನೀವೇ ಹೆಂಗಾರ ಮಾಡಿ ಮಗಿನಾ ಹುಡುಕ್ಸಿ ಕೊಟ್ಟುಬುಡಿ.ನಿಮ್ಮ ದಮ್ಮಯ್ಯ ಅಂತೀನಿ'ಎಂದು ಆತಂಕದಿಂದ ಗೌಡರಿಗೆ ಕೈ ಮುಗಿದ.ಅದಕ್ಕೆ ಗೌಡರು 'ನಡಿ ಪ್ಯಾಟೇಗ್ ಹೋಗನ.ಪೋಲಿಸ್ ಕಂಪ್ಲೇಟ್ ಕೊಟ್ಟು ಬರನ.ನಿನ್ ತವ ಮಂಜಂದು ಪೋಟ ಏನಾರ ಇದ್ರೆ ತಗಂಡು ಬಾ ಇಲ್ಲಿಗೆ.ನಾನು ಅಷ್ಟೋತಿಗೆ ಹೊರಟೀರ್ತೀನಿ'ಎಂದರು.ಸಿದ್ದ ಬೇಗನೇ ಹೋಗಿ ಪ್ರೇಮು ಕಟ್ಟಿಸಿ ಗೋಡೆಗೆ ನೇತು ಹಾಕಿದ ಹೊಗೆ ಹಿಡಿದು ಮಬ್ಬಾಗಿದ ಪೋಟೊವನ್ನು ತಂದ.ನಂಜೇಗೌಡರು ಸಿದ್ದ ಬಂದೊಡನೆ ಕೈನಲ್ಲಿದ್ದ ಹಣ್ಣುಕಾಯಿಯ ಕವರನ್ನು ಹಿಡಿದುಕೊಳ್ಳಲು ಕೊಟ್ಟು,ಬೈಕಿನಲ್ಲಿ ಸಿದ್ದನೊಡನೆ ಹೊರಟರು.ದಾರಿಯಲ್ಲಿಸಿಗುವ ದೇವಿರಮ್ಮನ ದೇವಸ್ಥಾನದ ಬಳಿ ಬೈಕು ನಿಲ್ಲಿಸಿ ಒಳನಡೆದರು.ಸಿದ್ದನು ಗೌಡರನ್ನು ಅನುಸರಿಸಿದನು.ಪುರಾತನವಾದ ದೇವಸ್ಥಾನ.ಗೌಡರು,ಮಂಜ ಸುರಕ್ಷಿತವಾಗಿ ಬಂದರೆ ನೂರೊಂದು ಕಾಯಿ ಹೊಡೆಯುವುದಾಗಿ ಬೇಡಿಕೊಂಡರು.ನಂತರ ಇಬ್ಬರು ಪ್ರಸಾದ ಸ್ವೀಕರಿಸಿ ಪ್ಯಾಟೆಯ ಕಡೆ ಬೈಕಿನಲ್ಲಿ ಹೊರಟರು.ಅತ್ತ ದೇವಸ್ಥಾನದ ಜಗಲಿಯ ಮೇಲೆ ಮಲಗಿದ ಮಂಜನನ್ನು ಯಾರೋ ಎಬ್ಬಿಸಿದರು.ಮಂಜ ತನ್ನ ನಿದ್ದೆಗಣ್ಣನ್ನು ಬಲವಂತವಾಗಿ ತೆರೆದು ನೋಡಿದ.ಎದುರಿಗೆ ದೇವಸ್ಥಾನದ ಭಟ್ಟರು ನಿಂತಿದರು.ಮಂಜ ಹಿಂದಿನ ರಾತ್ರಿ ನಡೆದದ್ದನ್ನೆಲ್ಲಾ ಭಟ್ಟರಿಗೆ ಹೇಳಿದ.ಭಟ್ಟರು ಬೆಳಗಾಗಿ ಎದ್ದು ಬಸ್ ಸ್ಟ್ಯಾಂಡಿಗೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಬರುವುದಾಗಿ ಭರವಸೆಯನ್ನು ನೀಡಿದ್ದರು.ಅತ್ತ ನಂಜೇಗೌಡರ ಬೈಕು ನಖರ ಪೋಲಿಸ್ ಠಾಣೆಟ ಎದುರು ನಿಂತಿತ್ತು.ನಂಜೇಗೌಡರು ಪೋಲಿಸರಿಗೆ ದೂರು ಬರೆದು,ಮಂಜನ ಪೋಟೋವನ್ನು ಕೊಟ್ಟು ಆದಷ್ಟು ಬೇಗ ಹುಡುಕಿಕೊಡಬೇಕಾಗಿ ಕೇಳಿಕೊಂಡರು.ಪೋಲಿಸ್ ಠಾಣೆಯಿಂದ ಹೊರಬಂದ ನಂಜೇಗೌಡರು ಸಿದ್ದನನ್ನು ಅಲ್ಲೇ ಇರಲು ಹೇಳಿ ಗೆಳೆಯರು ಸಿಕ್ಕರೆ ಅವರಿಗೂ ಮಂಜನನ್ನು ಹುಡುಕಲು ಹೇಳಬಹುದೆಂದು ಎತ್ತಲ್ಲೋ ಹೊರಟುಹೋದರು.ಸಿದ್ದ ಪೋಲಿಸ್ ಠಾಣೆಯ ಹೊರಭಾಗದ ಕಟ್ಟೆಯ ಮೇಲೆ ಕುಳಿತು ಬೀಡಿ ಹಚ್ಚಿಕೊಂಡು ಯೋಚಿಸುತ್ತಾ ಹೊಗೆ ಬಿಡತೊಡಗಿದ.ಸಿದ್ದನಿಗೆ ಮಕ್ಕಳನ್ನು ಅಪಹರಿಸಿ ಅಂಗಾಂಗಗಳನ್ನು ತೆಗೆಯುವವರು,ಮಕ್ಕಳನ್ನು ಬಲಿಕೊಡುವ ಭಯಂಕರ ಕ್ರೂರ ಮಾಂತ್ರಿಕರ ಚಿತ್ರ ಕಣ್ಮಂದೆ ಸುಳಿದು ಆತಂಕ ಹೆಚ್ಚಾಯಿತು.ಮನದಲ್ಲೇ ನಂಜೇಗೌಡರ ತೋಟದ ದೈವ ಭೂತಪ್ಪನನ್ನು ನೆನೆದು ನನ್ನ ಮಗ ಸುರಕ್ಷಿತವಾಗಿ ಹಿಂದುರುಗಿದರೆ ಕೋಳಿಯನ್ನು ಬಲಿಕೊಡುವುದಾಗಿ ಬೇಡಿಕೊಂಡ.ಅದೇ ಗುಂಗಿನಲ್ಲಿ ಸೇದುತ್ತಿರುವ ಬೀಡಿಯ ತುಂಡನ್ನು ಎಸೆದು ಮತ್ತೊಂದು ಬೀಡಿ ಹಚ್ಚಿಕೊಂಡು ಎಳೆದು ಎಳೆದು ಸುರುಳಿ,ಸುರುಳಿಯಾಗಿ ಹೊಗೆ ಬಿಡತೊಡಗಿದ.ಸಿದ್ದನಿಗಿದ್ದ ಮತ್ತೊಂದು ಚಿಂತೆಯೆಂದರೇ ಚಂದ್ರಿಗೆ ಹೇಗೆ ವಿಷಯ ತಿಳಿಸುವುದೆಂಬುದು.ಒಂದು ವೇಳೆ ವಿಷಯ ತಿಳಿದರೆ ಅದರ ಪರಿಣಾಮ ಹೀಗೆ ಇರುವುದೆಂದು ಹೇಳಲಾಗುವುದಿಲ್ಲ.ಯಾಕೆಂದರೆ ಹಿಂದೆ ಚಂದ್ರಿಯ ರೌದ್ರವತಾರದ ದರ್ಶನ ಸಿದ್ದನಿಗೆ ಆಗಿತ್ತು.ಹಿಂದೊಮ್ಮೆ ಸಿದ್ದ,ಪಕ್ಕದ ಹಳ್ಳಿಗೆ ಕಳ್ಳಭಟ್ಟಿ ಕುಡಿಯಲು ಹೋಗಿದ್ದ.ಪ್ಯಾಕೆಟ್ ಸಾರಾಯಿಯ ಮಾರಾಟ ಸರ್ಕಾರ ನಿಲ್ಲಿಸಿದ ಮೇಲೆ ಭಟ್ಟಿ ಸಾರಾಯಿಯೇ ಸಿದ್ದನಂಥಹ ಬಡವರ್ಗದ ಕುಡುಕರಿಗೆ ಅನಿವಾರ್ಯವಾಯಿತು.ಕಳ್ಳಭಟ್ಟಿಯಕುಡುಕ ಗ್ರಾಹಕರ ಸಂಖ್ಯೇ ಹೆಚ್ಚಾದಂತೇ,ಎಲ್ಲೋ ಒಂದೋ ಎರಡೋ ಮನೆಯಲ್ಲಿದ್ದ ಕಳ್ಳಭಟ್ಟಿ ವ್ಯಾಪಾರ ಎರಡು ಮನೆಗೊಂದರಂತೇ ಪ್ರಾರಂಭವಾಯಿತು.ಸಣ್ಣಪುಟ್ಟ ಗೂಡಂಗಡಿಗಳೆಲ್ಲ ಮಿನಿಬಾರುಗಳಂತೇ ತೋರತೊಡಗಿದವು.ಬೆಟ್ಟದೂರಿನ ಮಹಮದ್ ಕಾಕನ ಅಂಗಡಿಯ ಪ್ಲಾಸ್ಟಿಕ್ ಕೊಡಗಳೆಲ್ಲ ಹೇಳಹೆಸರಿಲ್ಲದಂತೇ ಖರ್ಚಾಗಿ ಹೋಯಿತು.ಅದರ ಜೊತೆಗೆ ಕಪ್ಪುಬೆಲ್ಲದ ವ್ಯಾಪಾರ ಭರ್ಜರಿಯಾರಿ ನಡೆಯತೊಡಗಿತ್ತು.ಜೀಪುಕಾರುಗಳನ್ನೇ ಕಂಡಿರದ ಬೆಟ್ಟದೂರಿನ ರಸ್ತೆಯಲ್ಲಿ ಈಗ ದಿನಕ್ಕೊಂದು ಐದಾರು ಬಾರಿ ಕಳ್ಳಭಟ್ಟಿ ಹಿಡಿಯುಲ ಸ್ಕ್ವಾಡಿನ ಜೀಪುಗಳು ಓಡಾಡತೊಡಗಿದವು.ಈ ವಾತಾವರಣ ಇದ್ದಾಗಲೇ ಸಿದ್ದ ಕಳ್ಳಭಟ್ಟಿ ತರಲೆಂದು ಹೋಗಿದ್ದು.ಸಿದ್ದ ಕಳ್ಳಭಟ್ಟಿಯ ಶೀಶೆಯನ್ನು ಜೇಬಿನಲ್ಲಿಟ್ಟುಕೊಂಡು ರಸ್ತೆಬದಿ ನಡೆದು ಬರುವಾಗ ಸ್ಕ್ವಾಡಿನ ಜೀಪು ರಸ್ತೆಯ ಪಕ್ಕ ನಿಂತಿರುವುದು ಕಂಡಿತು.ಯಾವುದೇ ಯೋಚನೆಯಲ್ಲಿದ್ದ ಸಿದ್ದ ಜೀಪಿಗೆ ಒರಗಿ ನಿಂತ ಸ್ಕ್ವಾಡಿನವನನ್ನು ಗಮನಿಸಲಿಲ್ಲ.ಆದರೆ ಸಿದ್ದನ ಜೇಬಿನ ಗಳಕ್ ಗಳಕ್ ಶಬ್ಧ ಸ್ಕ್ವಾಡಿನವನನ್ನು ಆಕರ್ಷಿಸಿ,ಸಿದ್ದನಿಗೇ ನಿಲ್ಲಲು ಹೇಳಿದ.ಸಿದ್ದ ಮುಂದೆ ನಡೆದರೆ ಬಾಟಲಿಯ ಶಬ್ಥ ಕೇಳಬಹುದೆಂದು ದೂರಕ್ಕೆ ನಿಂತ.ಸ್ಕ್ವಾಡಿನವನು ಸಿದ್ದನನ್ನು ಜೀಪು ಹತ್ತಲೂ ಹೇಳಿ,ಇತರ ಸಂಗಡಿಗರ ಬರುವಿಕೆಗಾಗಿ ಕಾಯುತ್ತಾ ಜೀಪಿನಲ್ಲಿ ಕುಳಿತ.ಇತ್ತ ಯಾರಿಂದಲೋ ವಿಷಯ ತಿಳಿದ ಚಂದ್ರಿ,ಎದ್ದನ್ನೋ ಬಿದ್ದೆನ್ನೋ ಎಂದು ಜೀಪಿನೆಡೆಗೆ ಬಂದಳು.ಬರುವಾಗ ಬಡಿಗೆ ಹಿಡಿದು ತಯಾರಾಗೇ ಬಂದಿದ್ದಳು.ಬಾಯಿ ತುಂಬ ಇದ್ದ ಎಲೆಅಡಿಕೆ ಉಗಿದು,ಜೀಪಿಗೆ ಒರಗಿ ನಿಂತು ಸಿಗರೇಟು ಸೇದುತ್ತಿದ ಸ್ಕ್ವಾಡಿನವನನ್ನು ಎಳೆದು ಕೆಳಗೆ ಹಾಕಿ ಬಾರಿಸತೊಡಗಿದಳು.'ಬ್ಯಾರಲ್ ಗಟ್ಟಲೇ ತುಂಬಿಸಿ ಇಟ್ಕಂಡಿರೋ ಕಳ್ಳಭಟ್ಟಿ ಇಡಿಯದ್ ಬುಟ್ ಬುಟ್ಟು.ಇಲ್ಲಿ ಬೀದಿಲ್ಲಿ ಹೋಗ್ಬರೋಗೆಲ್ಲ ಅಡ್ಡಹಾಕಿ ತೊಂದರೆ ಕೊಡ್ತೀಯಾ'ಎಂದು ಚಂದ್ರಿ ಬೈಯತೊಡಗಿದಳು.ಸಿದ್ದ,ಚಂದ್ರಿಯ ರೌದ್ರವತಾರವನ್ನು ಕಂಡು ಚಂದ್ರಿಯನ್ನು ಅಲ್ಲಿಂದ ಕರೆದುಕೊಂಡು ಹೋದ.ಸಿದ್ದ ಪೋಲಿಸ್ ಸ್ಟೇಷನಿನ ಹೊರಗೆ ಹೀಗೆ ಯೋಚಿಸುತ್ತಾ ಕುಳಿತವನು,ಸೇದುತ್ತಿದ್ದ ಬೀಡಿಯ ಬೆಂಕಿ ಕೈಗೆ ತಗುಲಿದಾಗ ಯೋಚನೆಯಿಂದ ಹೊರಬಂದ.ಆ ವೇಳೆಗೆ ನಂಜೇಗೌಡರು ಬಂದರು.ಸಿದ್ದನ ಕೈಗೆ ಸ್ವಲ್ಪ ಹಣವನ್ನು ಕೊಟ್ಟು ಬಸ್ ನಲ್ಲಿ ಹೋಗಬೇಕೆಂದು ನಾನು ಸ್ವಲ್ಪ ಕೆಲಸ ಮುಗಿಸಿಕೊಂಡು ಮತ್ತೆ ಬರುತ್ತೇನೆಂದು ಹೇಳಿ ಬೈಕಿನಲ್ಲಿ ಬಸ್ ನಿಲ್ದಾಣದ ಬಳಿ ಇಳಿಸಿ ಹೋದರು.ಬೆಟ್ಟದೂರಿಗೆ ಹೋಗುವ ಹಸಿರು ಬಣ್ಣದ ಮಾರುತಿ ಬಸ್ಸು ಆಗಲೇ ಬಂದು ನಿಂತಿತ್ತು.ಬಸ್ಸು ಹೊರಡಲು ಇನ್ನೂಹಾಕಷ್ಟು ಸಮಯವಿತ್ತು.ಸಿದ್ದ ಬಸ್ಸಿನಿಂದ ಸ್ವಲ್ಪ ದೂರಕ್ಕೆ ಹೋಗಿ ಮರೆಯಲ್ಲಿ ನಿಂತು ಬೀಡಿಸೇದತೊಡಗಿದ.
ಚಂದ್ರಿಗೆ ಏನೆಂದು ಹೇಳುವುದು ಎನ್ನುವುದು ಸಿದ್ದನಿಗೆ ತೋಚಲಿಲ್ಲ.ಚಂದ್ರಿಗೆ ವಿಷಯ ತಿಳಿದರೆ ಅದೆಷ್ಟು ನೊಂದುಕೊಳ್ಳತ್ತಾಳೋ.ಏನು ರಂಪ ಮಾಡಿ ಬಿಡುತ್ತಾಳೋ ಎನ್ನುವುದು ಊಹಿಸಲು ಸಾಧ್ಯವಿರಲಿಲ್ಲ.ಅದೇ ಗುಂಗಿನಲ್ಲಿ ಬಾಡಿದ ಮುಖಭಾವದಿಂದ ಸುತ್ತಲ್ಲ ದೃಶ್ಯವನ್ನು ಯಾಂತ್ರಿಕವಾಗಿ ನೋಡುತ್ತಾ ನಿಂತ.ಹಾಗೇ ನೋಡುತಿರುವಾಗಲೇ ದೂರದಲ್ಲಿ ಮಂಜನಂತೇ ತೋರುವ ಆಕಾರವೊಂದು ಮತ್ತೊಬ್ಬ ವ್ಯಕ್ತಿಯೊಂದಿಗೆ ನಡೆದು ಬರುತ್ತಿರುವಂತೇ ತೋರಿತು.ಸೇದುತ್ತಿದ್ದ ಬೀಡಿಯನ್ನು ಎಸೆದು ಸಿದ್ದ,ಆ ಕಡೆಗೆ ಹೆಜ್ಜೆ ಹಾಕತೊಡಗಿದ.ಹತ್ತಿರ ಹತ್ತಿರವಾಗುತ್ತಿದಂತೇ ಆಕಾರ ಸ್ಪಷ್ಟವಾಗಿ ಮಂಜ,ಪೇಟೆ ದೇವಿರಮ್ಮನ ಅರ್ಚಕರೊಡನೆ

ಕಥೆ;ಪ್ಯಾಟೆ4

ಮಂಜ ತುಂಬಾ ದೂರ ಬಂದ ನಂತರ ಕ್ಯಾಂಟಿನಿನ ಕಾಕನಿಗೆ ಹೇಳದೇ ಬಂದದ್ದು ನೆನಪಾಯಿತು.ಕತ್ತಲೆಯಲ್ಲಿ ಸಮಯ ಅಂದಾಜು ಮಾಡಲಾಗಲಿಲ್ಲ.ಆದರೆ ತಾನು ಹೊರಟು ತುಂಬ ಹೊತ್ತಾಗಿರುವುದು ತಿಳಿಯಿತು.ಹಿಂದಿರುಗಿ ಹೋಗುವುದೆಂದು ನಿರ್ಧರಿಸಿ ಬೇಗ ಬೇಗ ನಡೆಯತೊಡಗಿದ.ಬೀದಿಬದಿಯ ಪಾನಿಪೂರಿ,ಗೋಬಿಮಂಚೂರಿ ಗಾಡಿಗಳು ಅಂದಿನ ಕೆಲಸ ಮುಗಿಸಿ ಮನೆಯ ಕಡೆಗೆ ಸಾಗುತ್ತಿದ್ದವು.ಬರಬರುತ್ತಾ ವಾಹನಗಳ ಓಡಾಟ ಕಡಿಮೆಯಾಗಿ ಬಣ್ಣಬಣ್ಣದ ದೀಪಗಳಿಂದ ಜಗಮಗಿಸುವ ಅಂಗಡಿಮುಂಗಟುಗಳು ಬಾಗಿಲು ಹಾಕಿ ಬೋಳುಬೋಳಾಗಿ ಕಾಣತೊಡಗಿತ್ತು.ಬೀದಿದನಗಳು ರಸ್ತೆಯ ಮೇಲೆ ಮಲಗಿ ಮೆಲುಕು ಹಾಕತೊಡಗಿದವು.ಒಟ್ಟಿನಲ್ಲಿ ಗಂಧರ್ವಲೋಕದ ತುಣುಕೊಂದರಂತೇ ಕಂಡ ಪ್ಯಾಟೆ ಖಾಲಿಖಾಲಿಯಾಗಿ ಕಾಣತೊಡಗಿತ್ತು.ನಿರ್ಜನವಾಗಿದ್ದ ಬೀದಿಗಳನ್ನು ಕಂಡು ಮಂಜನಿಗೆ ಗಾಬರಿಯಾಯಿತು.ಬೇಗಬೇಗ ಹೆಜ್ಜೆ ಹಾಕತೊಡಗಿದ್ದ.ಸ್ವಲ್ಪ ದೂರಬಂದ ಮೇಲೆ ದಾರಿ ಇದ್ದಲ ಎನಿಸಿ,ಹಿಂದಕ್ಕೆ ಮುಖ್ಯರಸ್ತೆಗೆ ಬಂದು ಬೋರ್ ವೆಲ್ ಇದ್ದ ಎಡರಸ್ತೆಗೆ ತಿರುಗಿದ.ಈಗ ಅಲ್ಲಿ ಮೊದಲು ನೋಡಿದ ಅಂಗಡಿ ಮಳಿಗೆಗಳ ಬದಲು ಮಹಡಿ ಮನೆಗಳು ಕಂಡು ಬಂದವು.ಮಂಜನಿಗೆ ಯಾಕೋ ದಾರಿ ಮಸುಕು ಮಸುಕಾಗತೊಡಗಿತ್ತು.ಏನು ಮಾಡಲು ತೋಚದೇ ಅಳುತ್ತಾ ಕಾಲು ತಿರುಗದತ್ತ ಹೆಜ್ಜೆ ಹಾಕತೊಡಗಿದ್ದ.ಮನದಲ್ಲಿ ಅವ್ಯಕ್ತ ಭಯ ಮನೆ ಮಾಡಿತ್ತು.ಅಳುತ್ತಾ ದೇವರಲ್ಲಿ ಮೊರೆಯಿಟ್ಟ.ಮಂಜನ ಕೂಗು ದೇವರಿಗೆ ಕೇಳಿಸಿತ್ತೋ ಏನ್ನೋ?.ದೂರದಲ್ಲಿ ಬಾರಿ ಜನಸಂದಣಿ ನೆರೆದಿತ್ತು.ಪೇಟೇ ಪುರದಮ್ಮನ ದೇವಸ್ಥಾನದ ಅನ್ನ ಸಂತರ್ಪಣೆ ನಡೆಯುತಿತ್ತು.ಸಾಯಂಕಾಲ ಒಂದು ಬನ್ನನ್ನು ತಿಂದ ಮಂಜನಿಗೆ ಹಸಿವು ದಿಡೀರನೇ ಗಮನಕ್ಕೆ ಬಂತು.ಮೊದಲು ಹೊಟ್ಟೆ ತುಂಬಿಸಿ ನಂತರ ಉಳಿದ ವಿಚಾರ ಎಂದು ಕೊಂಡವನೇ ಜನರ ಸಾಲಿನ ಕೊನೆಗೆ ನಿಂತ.ಸಣ್ಣಗೆ ಮಳೆ ಬೀಳಲು ಪ್ರಾರಂಭಿಸಿತು.ಇತ್ತ ಗೌಡರು ಬಾರಿನ ಮಂದ ಬೆಳಕಿನ ಕೆಳಗೆ ಗೆಳೆಯರೊಡನೇ ಕುಡಿಯುತ್ತಾ ಲೋಕವನ್ನೇ ಮರೆತಿದ್ದರು.ಬಾರ್ ಬಾಗಿಲು ಹಾಕುವ ವೇಳೆಗೆ ತೂರಾಡತೊಡಗಿದರು.ಅವರಿಗೆ ಮಂಜನು ಜೊತೆಗೆ ಬಂದದಾಗಲಿ,ಡೀಸೆಲನ ವಿಚಾರವಾಗಲಿ ನೆನಪಾಗುವ ಸ್ಥಿತಿಯಲಿರಲ್ಲಲ್ಲ.ಬಾರಿನಿಂದ ಹೊರಟು ಗೆಳೆಯರನ್ನು ಬೀಳ್ಕೊಟು ತಮ್ಮ ಬೈಕನೇರಿ ಹೊರಟರು.ಕಾಕನ ಕ್ಯಾಂಟಿನ್ ಆ ಹೊತ್ತಿಗೆ ಬಾಗಿಲು ಹಾಕಿತ್ತು.ನಂಜೇಗೌಡರ ಬೈಕು ರಾತ್ರಿಯ ಮೌನಕ್ಕೆ ಅಣಿಯಾಗುತ್ತಿದ್ದ ಪ್ಯಾಟೆಯನ್ನು ಬಿಟ್ಟು ಮೌನವೇ ಮೈದಳೆದಂತಿರುವ ಬೆಟ್ಟದೂರಿನ ಕಡೆಗೆ ಹೊರಟಿತು.ಕಾಫಿತೋಟಗಳ ಮದ್ಯೆ ಹೊರಟ ರಸ್ತೆ.ಕಾಡುಗತ್ತಲೆ.ಭಯಹುಟ್ಟಿಸುವ ಗಾಡಮೌನದ ಮದ್ಯೆ ಯಾರು ಒಬ್ಬಂಟಿಯಾಗಿ ಓಡಾಡುವ ಸಾಹಸ ಮಾಡುವುದಿಲ್ಲ.ಅದು ಅಲ್ಲದೇ ಹಳ್ಳಿಗರ ಹಾರರ್ ಕಥೆಗಳು ಹೆಚ್ಚಾಗಿ ಈ ರಸ್ತೆಯ ಕೆಲವು ಜಾಗಗಳಿಂದ ಪ್ರಾರಂಭವಾಗುವುದು.ನಂಜೇಗೌಡರು ಅದು ಹೇಗೆ ಬೆಟ್ಟದೂರನ್ನು ತಲುಪಿದರೋ ದೇವರೇ ಬಲ್ಲ.ಬಹುಶಃ ಮತ್ತಿನ ಗಮ್ಮತಿರಬಹುದೇನೋ? ಗೌಡರು ಮನೆ ತಲುಪಿ ಬಾಗಿಲನ್ನು ಸವರುತ್ತಾ ಒಳನಡೆದಾಗ ಅದಾಗಲೇ ಮದ್ಯರಾತ್ರಿ ದಾಟಿತು.
ಮಂಜನನ್ನು ಕರೆತರದಿದ್ದ ವಿಷಯ ಸದ್ಯಕ್ಕೆ ಮಂಜನ ತಂದೆ ತಾಯಿಯರಿಗೆ ತಿಳಿಯುವಂತಿರಲಿಲ್ಲ.ಏಕೆಂದರೆ ಮಂಜ ಗೌಡರ ಜೊತೆಗೆ ಬಂದಿದ್ದರೂ,ಗೌಡರ ಮನೆಯಲ್ಲಿ ಮಲಗಿ,ಬೆಳಗಾಗಿ ತನ್ನ ಮನೆಗೆ ಹೋಗುತ್ತಿದ.ಇನ್ನೂ ಗೌಡರ ಮನೆಯಲ್ಲಿ ಮಡದಿ,ಮಕ್ಕಳು ಆಗಲೇ ಮಲಗಿದರು.ನಂಜೇಗೌಡರು ವಾರದಲ್ಲಿ ಒಮ್ಮೆ ಪ್ಯಾಟೆಗೆ ಹೋಗಿ ಬರುವುದು ಖಾಯಂ ಆದಾಗಿನಿಂದ ಮನೆಗೆ ಬರುವುದು ತಡವಾಗುತ್ತಿತ್ತು.ಗೌಡರೇ ಊಟ ಬಡಿಸಿಕೊಂಡು ಮಲಗತಿದ್ದರು.ಹೀಗಾಗಿ ಮಂಜನ ನಾಪತ್ತೆ ಸದ್ಯಕ್ಕೆ ತಿಳಿಯುವಂತಿರಲಿಲ್ಲ.ಬೆಳ್ಳಗೆ ನಂಜೇಗೌಡರ ಮಡದಿ "ಮಂಜ ಎಲ್ಲಿ?,ಬೆಳಿಗೇನೇ ಮನಿಗೋದ್ನಾ?" ಎಂದು ಕೇಳುವವರೆಗೂ ಗೌಡರಿಗೆ ಮಂಜನ ವಿಚಾರ ನೆನಪಾಗಿರಲಿಲ್ಲ.ಈಗ ಓಂದೊಂದಾಗಿ ನೆನಪಾಗತೊಡಗಿ ಅಲ್ಪಸ್ವಲ್ಪ ಇದ್ದ ಅಮಲು ಇಳಿದು ಹೋಯಿತು.
ಅತ್ತ ಮಂಜನ ತಂದೆ ಸಿದ್ದ,ಮಂಜನ ತಾಯಿ ಚಂದ್ರಿ-ಮಂಜ ಬೆಳಗಾಗಿ ಮನೆಗೆ ಬರುವವನು ಯಾಕೆ ಬರಲಿಲ್ಲ ಎಂದು ಅನುಮಾನಗೊಂಡರು.ಇಬ್ಬರು ಬೆಳಗ್ಗೆ ನಂಜೇಗೌಡರ ತೋಟದ ಕೆಲಸಕೆಂದು ಗೌಡರ ಬಂಗಲೆಯ ಬಳಿ ಬಂದರು.ನಂಜೇಗೌಡರು ಏನೂ ಮಾಡಲು ತೋಚದೇ ಸಿದ್ದನಿಗೆ ಏನೆಂದು ಹೇಳುವುದು.ಆ ವಾಚಾಳಿ ಚಂದ್ರಿಯಂತು ವಿಷಯ ತಿಳಿದರೆ ರಂಪ ಮಾಡಿಬಿಡುತ್ತಾಳೆ ಎಂದು ಆತಂಕಗೊಂಡರು.ಆ ವೇಳೆಗೆ ಸಿದ್ದ ಅಂಗಳದಲ್ಲಿ ನಿಂತು 'ಗೌಡ್ರೇ' ಎಂದು ಕೂಗಿದ್ದು ಕೇಳಿಸಿತ್ತು.ನಂಜೇಗೌಡರು ಮನದಲ್ಲಿ ಅಳುಕಿದರೂ ತೋರಿಸಿಕೊಳ್ಳದೇ 'ಏನಾ ಸಿದ್ದ,ಆ ಲೈನ್ ಹಿಂದಗಡೆ ತೋಟ್ದಲ್ಲಿ ಕೆಲ್ಸ ಇಡೀರಿ.ಇನ್ನೊಂದಿಷ್ಟ್ ಆಳನ ಕಳ್ಸ್ತೀನಿ.ಅಮ್ಮೋರ್ ಹತ್ರ ಕಸಿ ಕ್ತಿ ಇಸಕಂಡು ಹೋಗಿ'ಎಂದು ಪ್ರತಿದಿನ ಕೆಲಸ ಹೇಳುವಂತೇ ಹೇಳಿ

ಕಥೆ:ಪೇಟೆ-೩

ಆ ವೇಳೆಗೆ ನಂಜೇಗೌಡರ ಗೆಳೆಯರ ನಾಲ್ಕು ಬೈಕುಗಳು ಬಂದು ನಿಂತವು.ಅವರೆಲ್ಲರನ್ನು ಮಂಜ,ನಂಜೇಗೌಡರ ಮನೆಗೆ ಬಂದಾಗ ನೋಡಿದ.ನಂಜೇಗೌಡರ ಗೆಳೆಯರ ಬಗ್ಗೆ ಬೆಟ್ಟದೂರಿನಲ್ಲಿ ಗುಸುಗುಸು ಮಾತುಗಳನ್ನು ಕೇಳಿದ ಮಂಜ,ಇವರೇಕೇ ಇಲ್ಲಿ ಬಂದರೂ ಎಂದುಕೊಂಡ.ಮಂಜನ ಬಳಿ ಬಂದ ನಂಜೇಗೌಡರು'ಲೋ ಮಂಜ ಇಲ್ಲೆ ಕೂತ್ಕಾ,ನಾನು ಡಿಸೀಲ್ ತಗಾಂಡು ಇತ್ಲಾಗ್ ಬರ್ರ್ತೀನಿ,ಎಲ್ಲಿಗೂ ಹೋಗಬೇಡ ಆಯ್ತಾ?.ತಗಾ ಇ ದುಡ್ಡು,ಏನಾರಬೇಕಾರೇ ತಗಾ ಆಯ್ತಾ?' ಎಂದು ಹೇಳಿ ಗೆಳೆಯರೊಡನೆ ಹೊರಟುಹೋದರು.ಮಂಜ ಕಾಕನ ಕ್ಯಾಂಟಿನಿನ ಹೊರಗೆ ಹಾಕಿದ ಬೇಂಚಿನ ಮೇಲೆ ಕುಳಿತು,ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನೋಡತೊಡಗಿದ.ಅದಾಗಲೇ ಸಂಪೂರ್ಣ ಕತ್ತಲಾವರಿಸಿ,ಸೊಳ್ಳೆಗಳು ಕಾಟಕೊಡಲಾರಂಬಿಸಿದವು.ತುಂಬಾ ಹೊತ್ತಿನಿಂದ ಕುಳಿತು ಬೇಸರವಾಗತೊಡಗಿತ್ತು.ಮಂಜನ ಗಮನಿಸಿದ ಕ್ಯಾಂಟಿನಿನ ಕಾಕ ತಮ್ಮ ಎಂದಿನ ಮಲಯಾಳಿ ಮಿಶ್ರಿತ ಕನ್ನಡದಲ್ಲಿ ಒಳಗೆ ಬಂದು ಕೂರಲು ಹೇಳಿ ಅರ್ಧಕಾಫಿಯನ್ನು ಕೊಟ್ಟು,ತಾವು ಕಾಫಿ ಕುಡಿಯತೊಡಗಿದರು.ಮಂಜ ಕಾಫಿ ಕುಡಿದು ಮುಗಿಸಿ ಯೋಚಿಸತೊಡಗಿದ್ದ.'ಗೌಡ್ರು ಬರದು ಇನ್ನೂ ಲೇಟು,ಒಂದು ರೌಂಡು ಯಾಕ್ ಹೋಗಬಾರದು,ಎಲ್ಲಾದ್ರು ಮೇಷ್ಟ್ರು ಕಂಡ್ರು ಕಾಣಬಹುದು'ಎಂದು ಬೀದಿಗಿಳಿದು ನಡೆಯತೊಡಗಿದ.ಹಿಂದೆ ಬರಲು ದಾರಿ ತಿಳಿಯಲೆಂದು ಲೈಟು ಕಂಬವನ್ನು,ಬೋರುವೆಲ್ಲನ್ನು ಗುರುತಾಗಿಟ್ಟುಕೊಂಡು ಹೆಜ್ಜೆ ಹಾಕತೊಡಗಿದ್ದ.ತನ್ನ ಮೆಚ್ಚಿನ ಮೇಷ್ಟ್ರರು ಕಾಣಬಹುದೆಂದು ಸುತ್ತಮುತ್ತ ಕಣ್ಣಾಡಿಸುತ್ತಾ ಮುಂದೆ ಸಾಗತೊಡಗಿದ್ದ.ಮಂಜನಿಗೆ ಮೇಷ್ಟ್ರು ಹೇಳುತ್ತಿದ್ದ ಸಂಗತಿಗಳು ನೆನಪಾದವು.ಬೆಳೆಯುವ ಮಕ್ಕಳು, ಆದರ್ಶ ಪುರುಷರ ಜೀವನವನ್ನು ಅರಿಯಬೇಕೆಂದು,ಗಾಂಧೀಜೀಯ ಆತ್ಮಕಥೆಯ ಪುಸ್ತಕವನ್ನು ಓದಲು ಕೊಟ್ಟದು,ಪುಸ್ತಕವನ್ನು ತೊರೆಯ ಪಕ್ಕದ ಹುಲ್ಲಿನ ಮೇಲೆ ಕುಳಿತು,ಜೇನುಗುಡ್ಡದ ಮೇಲೆ,ಮಾವಿನ ಮರದ ಕೊಂಬೆಯ ಮೇಲೆ,ಕರೆಂಟಿಲ್ಲದ ತನ್ನ ಮನೆಯ ಚಿಮಣಿಯ ದೀಪದ ಬೆಳಕಿನಲ್ಲಿ,ಕುಳಿತು ಓದಿದ್ದು ನೆನಪಾಯಿತು.ಅದಕ್ಕಿಂತಲೂ ಒಂದು ಭಾನುವಾರ ನಾಲ್ಕೈದು ಹುಡುಗರೊಡನೆ ಮೇಷ್ಟ್ರರು ಜೇನುಗುಡ್ಡಕ್ಕೆ ಹೋದಾಗಿನ ಅನುಭವ ಮರೆಯುವಂತಾಹದಲ್ಲ.ಅಂದು ಎಷ್ಟೊಂದು ವಿಚಾರಗಳ ಬಗ್ಗೆ ಹೇಳಿದರು.'ಪ್ರಕೃತಿ ರಹಸ್ಯಗಳ ಗಣಿ,ಪ್ರಕೃತಿ ಮುನಿದರೆ ಯಾವ ಜೀವಿಯು ಬದುಕಲು ಸಾಧ್ಯವಿಲ್ಲ,ಪ್ರಕೃತಿಯ ನಾಶ,ಪರೋಕ್ಷವಾಗಿ ಮಾನವನ ನಾಶ,ಅದರ ಪರಿಣಾಮ ಈಗ ಆಗದಿದ್ದರೂ ಮುಂದಿನ ಪೀಳಿಗೆಗೆ ಅದರ ಪ್ರಭಾವ ಆಗೇ ಆಗುತ್ತದೆ'ಎಂದದ್ದು.'ನಿಮ್ಮ ನಮ್ಮೆಲ್ಲರ ಹಿರಿಯರು ಶೋಷಣೆಗೆ ಗುರಿಯಾಗಲು ಕಾರಣ, ಅವರ ಅಜ್ಞಾನ ಮತ್ತು ಮುಗ್ಧತೆ.ಶೋಷಣೆಯಿಂದ ಹೊರಬರಬೇಕಾದರೇ ಶಿಕ್ಷಣವೊಂದೇ ದಾರಿ.ನಮ್ಮ ಹಿರಿಯರು ಶಿಕ್ಷಣದಿಂದ ವಂಚಿತರಾದರು.ಶಿಕ್ಷಣದ ಸಿಹಿಯನ್ನು ಕಹಿಯೆಂದು ತಿಳಿದರು.ಅವರ ಕಾಲ ಮುಗಿಯಿತು.ಆದರೆ ಶೋಷಣೆ ಇನ್ನೂ ನಿಂತಿಲ್ಲ.ಮುಂದಿನ ಪೀಳಿಗೆಯವರಾದ ನೀವುಗಳು ಶೋಷಣೆಯಿಂದ ಮುಕ್ತರಾಗಬೇಕಾದರೆ ಶಿಕ್ಷಣ ಪಡೆಯಲೇಬೇಕು'ಎಂದು ಭರವಸೆ ಮೂಡಿಸಿದು ನೆನಪಾಯಿತು.

ಕಥೆ:ಪೇಟೆ-೨

ಆದರೆ ಗೌಡರ ಯೋಚನೆಯೇ ಬೇರೆಯಿತ್ತು.ಗೌಡರು ಪೇಟೆಗೆ ಬಂದಿದ್ದು ಡಿಸೇಲ್ ಕೊಳ್ಳಲಾದರೂ,ಅದು ಮಾತ್ರ ಕಾರಣವಾಗಿರಲಿಲ್ಲ.ನಂಜೇಗೌಡರ ಅನೇಕ ದೌರ್ಬಲ್ಯಗಳಲ್ಲಿ ಕುಡಿತವೂ ಒಂದು.ಅವರ ಇತರ ಕುಡುಕ ಗೆಳೆಯರು ತಮ್ಮ-ತಮ್ಮ ಮನೆಗಳಲ್ಲಿ ನೆಪ ಹೇಳಿ ಪೇಟೆ ತಿರುಗಲು ಬರುತ್ತಿದರು.ವಾರದ ಒಂದು ದಿನ ಎಲ್ಲರೂ ಕೂಡಿ ಗುಂಡುಪಾರ್ಟಿ ಮಾಡುವುದು ಮಾಮೂಲಾಗಿತ್ತು.ಇ ದಿನದ ಪಾರ್ಟಿಗೆ ಪೇಟೆಗೆ ಬರಲು ಡೀಸೆಲ್ ತರುವುದು ನೆಪ ಮಾತ್ರವಾಗಿತ್ತು.ಆದರೆ ನಂಜೇಗೌಡರು ಮುಚ್ಚುಮರೆ ಮಾಡುವುದು ಅಗತ್ಯವಿತ್ತು.ಬೆಟ್ಟದೂರಿನಲ್ಲಿ ನಂಜೇಗೌಡರ ವಂಶಕ್ಕೆ ಗೌರವವಿತ್ತು.ಬೆಟ್ಟದೂರಿನ ಗ್ರಾಮದೇವತೆ ದೇವಿರಮ್ಮನ ದೇವಸ್ಥಾನದ ನಿರ್ವಣನೆಯ ಜವಾಬ್ದಾರಿ ಹಿಂದಿನಿಂದಲೂ ನಂಜೇಗೌಡರ ವಂಶದವರದಾಗಿತ್ತು.ಅದು ಇಲ್ಲದೇ ಈಸಲದ ಗ್ರಾಮ ಪಂಚಾಯತಿಯ ಅದ್ಯಕ್ಷ ಸ್ಥಾನಕ್ಕೆ ನಂಜೇಗೌಡರು ಸ್ಪರ್ದಿಸುವವರಿದ್ದರು.ಮನೆಗೆ ತಂದು ಕದ್ದುಮುಚ್ಚಿ ಕುಡಿಯಲು ಸಾದ್ಯವಿರಲಿಲ್ಲ.ಅವರ ವಂಶದಲ್ಲಿ ಯಾರು ಸಹ ಕುಡಿಯುತಿರಲಿಲ್ಲ.(ಎಲ್ಲೋ ಕೆಲವರು ಮಾತ್ರ ಕದ್ದು ಮುಚ್ಚಿ ಕುಡಿಯುತ್ತಿದರಷ್ಟೇ).ಈ ಕಾರಣದಿಂದಾಗಿ ಗೌಡರು ಗೌಪ್ಯತೆ ಕಾಪಾಡುವ ಅಗತ್ಯವಿತ್ತು. ನಂಜೇಗೌಡರು ಮತ್ತು ಮಂಜ ಪೇಟೆಯನ್ನು ತಲುಪುವಷ್ಟರಲ್ಲಿ ಮಳೆ ಸಂಪೂರ್ಣ ಕಡಿಮೆಯಾಯಿತು.ಸಂಪೂರ್ಣವಾಗಿ ಕತ್ತಲಾವರಿಸಿತ್ತು.ಮಂಜ ರಾತ್ರಿಯ ಪೇಟೆಯನ್ನು ಕಂಡಿರಲಿಲ್ಲ.ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಬೀದಿಗಳನ್ನು ನೋಡಿ ದಂಗಾಗಿ ಹೋದ.ನಂಜೇಗೌಡರು ಕಾಕನ ಕ್ಯಾಂಟಿನ್ ಬದಿಗೆ ಬೈಕನ್ನು ನಿಲ್ಲಿಸಿ,ಬೈಟು ಕಾಫಿಗೆ ಹೇಳಿ,ಸಿಗರೇಟು ಹಚ್ಚಿಕೊಂಡರು.ಮಂಜ ಅಲ್ಲೇ ನಿಂತು ಕಾಕನ ಕ್ಯಾಂಟಿನಿನ ಟೇಬಲ್ಲಿನ ಮೇಲೆ ಜೋಡಿಸಿದ ಗಾಜಿನ ಬಾಟಲಿಗಳಲ್ಲಿನ ಬನ್ನು,ಬ್ರೆಡ್ಡು,ಬತ್ತಾಸುಗಳನ್ನು ತದೇಕಚಿತ್ತದಿಂದ ನೋಡತೊಡಗಿದ್ದ.ಅಷ್ಟರಲ್ಲಿ ಕಾಫಿ ಮಂಜನ ಕೈಗೆ ಬಂತು.ನಂಜೇಗೌಡರು ಮಂಜನಿಗೆ ಬನ್ನನ್ನು ಕೊಟ್ಟು,ಅಲ್ಲಿ ಯಾರೋ ಪರಿಚಯದವರೊಡನೆ ಮಾತನಾಡುತ್ತಾ ನಿಂತರು.

ಕಥೆ:ಪೇಟೆ-೧

ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ ಗುಡ್ಡದೂರಿಗೆ ಹೋಗಿರಬಹುದೇನೋ.ಆದರೆ ಇಂದು ಮಂಜ ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ಅವನು ಪ್ರಾರ್ಥಿಸಿದ ಸಕಲದೇವರ ಅನುಗ್ರಹವೆಂಬಂತೆ ಪೇಟೆಗೆ ಹೋಗುವ ಸುಯೋಗ ಒದಗಿತ್ತು. ಆ ದಿನ ಬೆಳಿಗ್ಗೆ ನಂಜೇಗೌಡರು ಮಂಜನ ತಂದೆ ಸಿದ್ದನ ಬಳಿ 'ಏ ಸಿದ್ದ ಇವತ್ತು ಸಾಯಂಕಾಲಕ್ಕೆ ಮೋಟರಿಗೆ ಡೀಸೆಲ್ ತರಕೋಗ್ಬೇಕು.ಬೈಕಲಿ ಕ್ಯಾನ್ ಇಡಕಂಡ್ ಬರಕಾಗಲ್ಲ,ಮಂಜ್ ನ ಕಳ್ಸು'ಎಂದು ಹೇಳಿದರು.ಈ ಸುದ್ದಿ ಕೇಳಿದಾಗಿನಿಂದ ಮಂಜ ನಿಂತಲ್ಲಿ ನಿಲ್ಲದವನಾಗಿದ್ದ.ಶಾಲೆಯ ಸಮವಸ್ತ್ರವನ್ನು ತೊಟ್ಟು,ತಲೆಗೊಂದು ಯಾರೋ ಕೊಟ್ಟ 'ಪಲ್ಸ್ ಪೋಲಿಯೋ ಭಾನುವಾರ'ಎಂದು ಬರೆದ ಕ್ಯಾಪನ್ನು ಹಾಕಿದ್ದ.ಅವನ ಬಳಿ ಇದ್ದ ಬಟ್ಟೆಗಳಲ್ಲಿ ಶಾಲೆಯ ಸಮವಸ್ತ್ರವೊಂದೇ ತಕ್ಕ ಮಟ್ಟಿಗೆ ಬಣ್ಣ ಮತ್ತು ಶುದ್ದತೆಯ ದೃಷ್ಟಿಯಿಂದ ಚೆನ್ನಾಗಿದದ್ದು.ಎಣ್ಣೆ ಹಾಕಿ ನೀಟಾಗಿ ಬಾಚಿದ ತಲೆ ಕಾಣಲಿ ಎಂದು ಆಗಾಗ ಕ್ಯಾಪನ್ನು ತೆಗೆದು ಕೈಯಲ್ಲಿ ಸವರಿಕೊಳ್ಳುತ್ತಿದ್ದ.ನಂಜೇಗೌಡರೊಡನೆ ಮಂಜ ಬೈಕಿನಲ್ಲಿ ಹೊರಟಾಗ ಆಗಿನ್ನೂ ಕತ್ತಲಾಗುತ್ತಿತ್ತು.ಮೋಡ ಮುಸುಕಿದ್ದರಿಂದ ಸ್ಪಲ್ಪ ಮುಂಚೆಯೇ ಕತ್ತಲಾದಂತೇ ತೋರುತಿತ್ತು.ಬೆಟ್ಟದೂರದಿಂದ ಹೊರಟ್ಟರೆ ಚಿಕ್ಕಮಗಳೂರು ಪೇಟೆ ತಲುಪುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಕಾಫಿತೋಟ ಹಲವಾರು ಮೈಲಿಗಳವರೆಗೂ ವ್ಯಾಪಿಸಿದೆ.ನಂಜೇಗೌಡರು ಮಳೆ ಬರುವ ಮೊದಲು ಪೇಟೆಯನ್ನು ಸೇರಬೇಕೆಂಬ ತರಾತುರಿಯಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾರೆ.ನಂಜೇಗೌಡರ ಬೈಕಿನ ಕರ್ಕಶ ಧ್ವನಿ ಮೌನವಾಗಿದ್ದ ಪರಿಸರವನ್ನು ಪ್ರವೇಶಿಸುತ್ತಿದಂತೆ ವಿವಿಧ ಬಗ್ಗೆಯ ಪಕ್ಷಿಗಳು ಹಾರಿಹೋದವು.ಅಕ್ಷಯ ಕಾನನದ ಯಾವುದೋ ಮೂಲೆಯಲ್ಲಿ ಕಳ್ಳಭಟ್ಟಿ ಬೇಯಿಸುತ್ತಿದ್ದ ಕೆಲವರು ಕೆಲಕಾಲ ಗಾಬರಿಗೊಂಡರು.ಬೈಕಿನ ಕರ್ಕಶಧ್ವನಿ ಅವರ ಕೇಳುವಿಕೆಯ ವ್ಯಾಪ್ತಿಯನ್ನೂ ದಾಟಿ ಮುಂದೆ ಹೋದಾಗ ನಿರಾಳರಾದರು.ನಂಜೇಗೌಡರಿಗೆ ಇದ್ದು ಯಾವುದರ ಪರಿವೇ ಇರಲಿಲ್ಲ.ಪೇಟೆಯಿಂದ ತರಬೇಕಾದ ಸಾಮಾನುಗಳ ಪಟ್ಟಿಯನ್ನು ಯೋಚಿಸುತ್ತಾ,ಅದೇ ಗುಂಗಿನಲ್ಲಿ ವೇಗವಾಗಿ ಬೈಕನ್ನು ಚಲಾಯಿಸುತ್ತಿದ್ದರು.ಆದರೆ ಅವರ ಬೈಕು ಮಾತ್ರ ತನ್ನ ಕರ್ಕಶ ಮಾರ್ದನಿಯಿಂದ ಸುತ್ತಲ್ಲಾ ಪರಿಸರದಲ್ಲಿ ತನ್ನ ಇರುವಿಕೆಯನ್ನು ಗುರುತಿಸಿ,ತಾನು ಹೋದಲೆಲ್ಲಾ ಪರಿಸರದ ಗಮನವನ್ನು ಸೆಳೆಯುತ್ತಿತ್ತು.ರಸ್ತೆಬದ್ದಿಯ ತೋಟದಲ್ಲಿ ಹಲಸಿನಹಣ್ಣು ಕದಿಯಲು ಬಂದಿದ್ದ ಹಳ್ಳಿಯ ಹುಡುಗರು ಬೈಕಿನ ಆಕ್ರಂದನವನ್ನು ಕೇಳಿ,ತೋಟದ ಮಾಲಿಕರು ಬಂದರೆಂದು ಹಣ್ಣನ್ನು ಅಲ್ಲೆ ಎಸೆದು ಪರಾರಿಯಾದರು.ಚೋರಕ್ಕಿಗೆ ಗುರಿಯಿಟ್ಟು ಅಣಿಯಾಗುತ್ತಿದ್ದ ಆ ತೋಟದ ಹುಡುಗ ಚಾಟರಿಬಿಲ್ಲು ಬೀಸುವ ಮೊದಲೇ ಬೈಕಿನ ಆರ್ಭಟಕ್ಕೆ ಚೋರಕ್ಕಿ ಹಾರಿ ಹೋಯಿತು.-ಹೀಗೆ ಸುತ್ತಲಿನ ಪ್ರಕೃತಿಯ ತಪ್ಪಸಿಗೆ ಭಂಗ ತರುತ್ತ ಬೈಕು ಮುಂದುವರೆಯಿತು. ಅಷ್ಟರಲ್ಲಿ ಸಣ್ಣಗೆ ಮಳೆ ಪ್ರಾರಂಭವಾಯಿತು.ಸಣ್ಣಗೆ ಪ್ರಾರಂಭವಾದ ಮಳೆ ಬರಬರುತ್ತಾ ರಭಸವಾಗಿ ಸುರಿಯಲಾರಂಬಿಸಿತ್ತು.ನಂಜೇಗೌಡರು ಮಳೆಗೆ ಜರ್ಕೀನ್ ಹಾಕಿಕೊಂಡಿದರು.ಆದರೆ ಮಂಜ ನೆನೆದು ತೊಪ್ಪೆಯಾಗಿ ಹೋಗಿದ್ದ.ಮಂಜನ ಕ್ಯಾಪ್ ಹಾಕಿದ್ದ ತಲೆಯಿಂದ ಎಣ್ಣೆಮಿಶ್ರಿತ ಮಳೆಹನಿಗಳು ಮುತ್ತಿನ ಮಣಿಗಳಂತೆ ಮುಖದ ಮೇಲೆ ಜಾರುತ್ತಿದ್ದವು.ಆದರೆ ಮಂಜನಿಗೆ ಈ ಯಾವುದರ ಪರಿವೆಯೂ ಇರಲಿಲ್ಲ.ಅವನು ಪೇಟೆಯ ವೈಭವಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದ.ಪೇಟೆಯ ಬೀದಿ ಬದಿಯ ಬೇಕರಿಗಳಲ್ಲಿ ಬಣ್ಣದ,ರುಚಿಯಾದ ತಿಂಡಿಗಳು.ಸದಾಕಾಲ ಬಿಡುವಿಲ್ಲದೇ ಚಲಿಸುವ ವಾಹನಗಳು,ಬಣ್ಣಬಣ್ಣದ ಉಡುಪು ತೊಟ್ಟಜನಗಳು-ಇದೆಲ್ಲದರ ಬಗ್ಗೆ ತಮ್ಮೂರಿನ ಜನಗಳ ಬಳಿ ಕೇಳಿ ಅಚ್ಚರಿ ಪಟ್ಟಿದ.ಅದಕ್ಕಿಂತಲೂ ಮುಖ್ಯವಾಗಿ,ಬೆಟ್ಟದೂರಿನ ಯಾವುದೋ ಮೂಲೆಯಲ್ಲಿ ಇದ್ದ ಮಂಜನಿಗೆ ಕಾಡಿನ ಆ ಮೌನ,ಏಕಾಂತ,ಬೇಸರ ತರಿಸುತ್ತಿತ್ತು.ಅದಲ್ಲದೇ ತನ್ನ ಮೆಚ್ಚಿನ ಮೇಷ್ಟರು ಮನೆಯಿರುವುದು ಇದೇ ಪೇಟೆಯಲ್ಲೆ.ಬೆಟ್ಟದೂರಿನ ಮುರುಕಲುಶಾಲೆಯಿಂದ ವರ್ಗಾವಣೆಯಾದ ಮೇಲೆ ಮಂಜನಿಗೆ ಮೇಷ್ಟ್ರನ್ನು ನೋಡಲಾಗಿರಲಿಲ್ಲ.ಈಗ ಎಲ್ಲಾದರೂ ಕಂಡರೂ ಕಾಣಬಹುದೆಂಬ ಸಣ್ಣ ನಿರೀಕ್ಷೆಯು ಮಂಜನ ಮನದ ಮೂಲೆಯಲ್ಲಿತ್ತು.ಈ ಎಲ್ಲಾ ಸಂಭ್ರಮಗಳಿಂದಾಗಿ ಎಂಥಹ ಬಿರುಮಳೆಯು ಮಂಜನ ಗಮನಕ್ಕೆ ಬಂದಿರಲಿಲ್ಲ.