ಬುಧವಾರ, ಏಪ್ರಿಲ್ 18, 2012

ಕಥೆ:ಪೇಟೆ-೧

ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ ಗುಡ್ಡದೂರಿಗೆ ಹೋಗಿರಬಹುದೇನೋ.ಆದರೆ ಇಂದು ಮಂಜ ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ಅವನು ಪ್ರಾರ್ಥಿಸಿದ ಸಕಲದೇವರ ಅನುಗ್ರಹವೆಂಬಂತೆ ಪೇಟೆಗೆ ಹೋಗುವ ಸುಯೋಗ ಒದಗಿತ್ತು. ಆ ದಿನ ಬೆಳಿಗ್ಗೆ ನಂಜೇಗೌಡರು ಮಂಜನ ತಂದೆ ಸಿದ್ದನ ಬಳಿ 'ಏ ಸಿದ್ದ ಇವತ್ತು ಸಾಯಂಕಾಲಕ್ಕೆ ಮೋಟರಿಗೆ ಡೀಸೆಲ್ ತರಕೋಗ್ಬೇಕು.ಬೈಕಲಿ ಕ್ಯಾನ್ ಇಡಕಂಡ್ ಬರಕಾಗಲ್ಲ,ಮಂಜ್ ನ ಕಳ್ಸು'ಎಂದು ಹೇಳಿದರು.ಈ ಸುದ್ದಿ ಕೇಳಿದಾಗಿನಿಂದ ಮಂಜ ನಿಂತಲ್ಲಿ ನಿಲ್ಲದವನಾಗಿದ್ದ.ಶಾಲೆಯ ಸಮವಸ್ತ್ರವನ್ನು ತೊಟ್ಟು,ತಲೆಗೊಂದು ಯಾರೋ ಕೊಟ್ಟ 'ಪಲ್ಸ್ ಪೋಲಿಯೋ ಭಾನುವಾರ'ಎಂದು ಬರೆದ ಕ್ಯಾಪನ್ನು ಹಾಕಿದ್ದ.ಅವನ ಬಳಿ ಇದ್ದ ಬಟ್ಟೆಗಳಲ್ಲಿ ಶಾಲೆಯ ಸಮವಸ್ತ್ರವೊಂದೇ ತಕ್ಕ ಮಟ್ಟಿಗೆ ಬಣ್ಣ ಮತ್ತು ಶುದ್ದತೆಯ ದೃಷ್ಟಿಯಿಂದ ಚೆನ್ನಾಗಿದದ್ದು.ಎಣ್ಣೆ ಹಾಕಿ ನೀಟಾಗಿ ಬಾಚಿದ ತಲೆ ಕಾಣಲಿ ಎಂದು ಆಗಾಗ ಕ್ಯಾಪನ್ನು ತೆಗೆದು ಕೈಯಲ್ಲಿ ಸವರಿಕೊಳ್ಳುತ್ತಿದ್ದ.ನಂಜೇಗೌಡರೊಡನೆ ಮಂಜ ಬೈಕಿನಲ್ಲಿ ಹೊರಟಾಗ ಆಗಿನ್ನೂ ಕತ್ತಲಾಗುತ್ತಿತ್ತು.ಮೋಡ ಮುಸುಕಿದ್ದರಿಂದ ಸ್ಪಲ್ಪ ಮುಂಚೆಯೇ ಕತ್ತಲಾದಂತೇ ತೋರುತಿತ್ತು.ಬೆಟ್ಟದೂರದಿಂದ ಹೊರಟ್ಟರೆ ಚಿಕ್ಕಮಗಳೂರು ಪೇಟೆ ತಲುಪುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಕಾಫಿತೋಟ ಹಲವಾರು ಮೈಲಿಗಳವರೆಗೂ ವ್ಯಾಪಿಸಿದೆ.ನಂಜೇಗೌಡರು ಮಳೆ ಬರುವ ಮೊದಲು ಪೇಟೆಯನ್ನು ಸೇರಬೇಕೆಂಬ ತರಾತುರಿಯಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾರೆ.ನಂಜೇಗೌಡರ ಬೈಕಿನ ಕರ್ಕಶ ಧ್ವನಿ ಮೌನವಾಗಿದ್ದ ಪರಿಸರವನ್ನು ಪ್ರವೇಶಿಸುತ್ತಿದಂತೆ ವಿವಿಧ ಬಗ್ಗೆಯ ಪಕ್ಷಿಗಳು ಹಾರಿಹೋದವು.ಅಕ್ಷಯ ಕಾನನದ ಯಾವುದೋ ಮೂಲೆಯಲ್ಲಿ ಕಳ್ಳಭಟ್ಟಿ ಬೇಯಿಸುತ್ತಿದ್ದ ಕೆಲವರು ಕೆಲಕಾಲ ಗಾಬರಿಗೊಂಡರು.ಬೈಕಿನ ಕರ್ಕಶಧ್ವನಿ ಅವರ ಕೇಳುವಿಕೆಯ ವ್ಯಾಪ್ತಿಯನ್ನೂ ದಾಟಿ ಮುಂದೆ ಹೋದಾಗ ನಿರಾಳರಾದರು.ನಂಜೇಗೌಡರಿಗೆ ಇದ್ದು ಯಾವುದರ ಪರಿವೇ ಇರಲಿಲ್ಲ.ಪೇಟೆಯಿಂದ ತರಬೇಕಾದ ಸಾಮಾನುಗಳ ಪಟ್ಟಿಯನ್ನು ಯೋಚಿಸುತ್ತಾ,ಅದೇ ಗುಂಗಿನಲ್ಲಿ ವೇಗವಾಗಿ ಬೈಕನ್ನು ಚಲಾಯಿಸುತ್ತಿದ್ದರು.ಆದರೆ ಅವರ ಬೈಕು ಮಾತ್ರ ತನ್ನ ಕರ್ಕಶ ಮಾರ್ದನಿಯಿಂದ ಸುತ್ತಲ್ಲಾ ಪರಿಸರದಲ್ಲಿ ತನ್ನ ಇರುವಿಕೆಯನ್ನು ಗುರುತಿಸಿ,ತಾನು ಹೋದಲೆಲ್ಲಾ ಪರಿಸರದ ಗಮನವನ್ನು ಸೆಳೆಯುತ್ತಿತ್ತು.ರಸ್ತೆಬದ್ದಿಯ ತೋಟದಲ್ಲಿ ಹಲಸಿನಹಣ್ಣು ಕದಿಯಲು ಬಂದಿದ್ದ ಹಳ್ಳಿಯ ಹುಡುಗರು ಬೈಕಿನ ಆಕ್ರಂದನವನ್ನು ಕೇಳಿ,ತೋಟದ ಮಾಲಿಕರು ಬಂದರೆಂದು ಹಣ್ಣನ್ನು ಅಲ್ಲೆ ಎಸೆದು ಪರಾರಿಯಾದರು.ಚೋರಕ್ಕಿಗೆ ಗುರಿಯಿಟ್ಟು ಅಣಿಯಾಗುತ್ತಿದ್ದ ಆ ತೋಟದ ಹುಡುಗ ಚಾಟರಿಬಿಲ್ಲು ಬೀಸುವ ಮೊದಲೇ ಬೈಕಿನ ಆರ್ಭಟಕ್ಕೆ ಚೋರಕ್ಕಿ ಹಾರಿ ಹೋಯಿತು.-ಹೀಗೆ ಸುತ್ತಲಿನ ಪ್ರಕೃತಿಯ ತಪ್ಪಸಿಗೆ ಭಂಗ ತರುತ್ತ ಬೈಕು ಮುಂದುವರೆಯಿತು. ಅಷ್ಟರಲ್ಲಿ ಸಣ್ಣಗೆ ಮಳೆ ಪ್ರಾರಂಭವಾಯಿತು.ಸಣ್ಣಗೆ ಪ್ರಾರಂಭವಾದ ಮಳೆ ಬರಬರುತ್ತಾ ರಭಸವಾಗಿ ಸುರಿಯಲಾರಂಬಿಸಿತ್ತು.ನಂಜೇಗೌಡರು ಮಳೆಗೆ ಜರ್ಕೀನ್ ಹಾಕಿಕೊಂಡಿದರು.ಆದರೆ ಮಂಜ ನೆನೆದು ತೊಪ್ಪೆಯಾಗಿ ಹೋಗಿದ್ದ.ಮಂಜನ ಕ್ಯಾಪ್ ಹಾಕಿದ್ದ ತಲೆಯಿಂದ ಎಣ್ಣೆಮಿಶ್ರಿತ ಮಳೆಹನಿಗಳು ಮುತ್ತಿನ ಮಣಿಗಳಂತೆ ಮುಖದ ಮೇಲೆ ಜಾರುತ್ತಿದ್ದವು.ಆದರೆ ಮಂಜನಿಗೆ ಈ ಯಾವುದರ ಪರಿವೆಯೂ ಇರಲಿಲ್ಲ.ಅವನು ಪೇಟೆಯ ವೈಭವಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದ.ಪೇಟೆಯ ಬೀದಿ ಬದಿಯ ಬೇಕರಿಗಳಲ್ಲಿ ಬಣ್ಣದ,ರುಚಿಯಾದ ತಿಂಡಿಗಳು.ಸದಾಕಾಲ ಬಿಡುವಿಲ್ಲದೇ ಚಲಿಸುವ ವಾಹನಗಳು,ಬಣ್ಣಬಣ್ಣದ ಉಡುಪು ತೊಟ್ಟಜನಗಳು-ಇದೆಲ್ಲದರ ಬಗ್ಗೆ ತಮ್ಮೂರಿನ ಜನಗಳ ಬಳಿ ಕೇಳಿ ಅಚ್ಚರಿ ಪಟ್ಟಿದ.ಅದಕ್ಕಿಂತಲೂ ಮುಖ್ಯವಾಗಿ,ಬೆಟ್ಟದೂರಿನ ಯಾವುದೋ ಮೂಲೆಯಲ್ಲಿ ಇದ್ದ ಮಂಜನಿಗೆ ಕಾಡಿನ ಆ ಮೌನ,ಏಕಾಂತ,ಬೇಸರ ತರಿಸುತ್ತಿತ್ತು.ಅದಲ್ಲದೇ ತನ್ನ ಮೆಚ್ಚಿನ ಮೇಷ್ಟರು ಮನೆಯಿರುವುದು ಇದೇ ಪೇಟೆಯಲ್ಲೆ.ಬೆಟ್ಟದೂರಿನ ಮುರುಕಲುಶಾಲೆಯಿಂದ ವರ್ಗಾವಣೆಯಾದ ಮೇಲೆ ಮಂಜನಿಗೆ ಮೇಷ್ಟ್ರನ್ನು ನೋಡಲಾಗಿರಲಿಲ್ಲ.ಈಗ ಎಲ್ಲಾದರೂ ಕಂಡರೂ ಕಾಣಬಹುದೆಂಬ ಸಣ್ಣ ನಿರೀಕ್ಷೆಯು ಮಂಜನ ಮನದ ಮೂಲೆಯಲ್ಲಿತ್ತು.ಈ ಎಲ್ಲಾ ಸಂಭ್ರಮಗಳಿಂದಾಗಿ ಎಂಥಹ ಬಿರುಮಳೆಯು ಮಂಜನ ಗಮನಕ್ಕೆ ಬಂದಿರಲಿಲ್ಲ.

1 ಕಾಮೆಂಟ್‌:

Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.