ಬುಧವಾರ, ಏಪ್ರಿಲ್ 18, 2012

ಕಥೆ:ಪೇಟೆ-೩

ಆ ವೇಳೆಗೆ ನಂಜೇಗೌಡರ ಗೆಳೆಯರ ನಾಲ್ಕು ಬೈಕುಗಳು ಬಂದು ನಿಂತವು.ಅವರೆಲ್ಲರನ್ನು ಮಂಜ,ನಂಜೇಗೌಡರ ಮನೆಗೆ ಬಂದಾಗ ನೋಡಿದ.ನಂಜೇಗೌಡರ ಗೆಳೆಯರ ಬಗ್ಗೆ ಬೆಟ್ಟದೂರಿನಲ್ಲಿ ಗುಸುಗುಸು ಮಾತುಗಳನ್ನು ಕೇಳಿದ ಮಂಜ,ಇವರೇಕೇ ಇಲ್ಲಿ ಬಂದರೂ ಎಂದುಕೊಂಡ.ಮಂಜನ ಬಳಿ ಬಂದ ನಂಜೇಗೌಡರು'ಲೋ ಮಂಜ ಇಲ್ಲೆ ಕೂತ್ಕಾ,ನಾನು ಡಿಸೀಲ್ ತಗಾಂಡು ಇತ್ಲಾಗ್ ಬರ್ರ್ತೀನಿ,ಎಲ್ಲಿಗೂ ಹೋಗಬೇಡ ಆಯ್ತಾ?.ತಗಾ ಇ ದುಡ್ಡು,ಏನಾರಬೇಕಾರೇ ತಗಾ ಆಯ್ತಾ?' ಎಂದು ಹೇಳಿ ಗೆಳೆಯರೊಡನೆ ಹೊರಟುಹೋದರು.ಮಂಜ ಕಾಕನ ಕ್ಯಾಂಟಿನಿನ ಹೊರಗೆ ಹಾಕಿದ ಬೇಂಚಿನ ಮೇಲೆ ಕುಳಿತು,ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನೋಡತೊಡಗಿದ.ಅದಾಗಲೇ ಸಂಪೂರ್ಣ ಕತ್ತಲಾವರಿಸಿ,ಸೊಳ್ಳೆಗಳು ಕಾಟಕೊಡಲಾರಂಬಿಸಿದವು.ತುಂಬಾ ಹೊತ್ತಿನಿಂದ ಕುಳಿತು ಬೇಸರವಾಗತೊಡಗಿತ್ತು.ಮಂಜನ ಗಮನಿಸಿದ ಕ್ಯಾಂಟಿನಿನ ಕಾಕ ತಮ್ಮ ಎಂದಿನ ಮಲಯಾಳಿ ಮಿಶ್ರಿತ ಕನ್ನಡದಲ್ಲಿ ಒಳಗೆ ಬಂದು ಕೂರಲು ಹೇಳಿ ಅರ್ಧಕಾಫಿಯನ್ನು ಕೊಟ್ಟು,ತಾವು ಕಾಫಿ ಕುಡಿಯತೊಡಗಿದರು.ಮಂಜ ಕಾಫಿ ಕುಡಿದು ಮುಗಿಸಿ ಯೋಚಿಸತೊಡಗಿದ್ದ.'ಗೌಡ್ರು ಬರದು ಇನ್ನೂ ಲೇಟು,ಒಂದು ರೌಂಡು ಯಾಕ್ ಹೋಗಬಾರದು,ಎಲ್ಲಾದ್ರು ಮೇಷ್ಟ್ರು ಕಂಡ್ರು ಕಾಣಬಹುದು'ಎಂದು ಬೀದಿಗಿಳಿದು ನಡೆಯತೊಡಗಿದ.ಹಿಂದೆ ಬರಲು ದಾರಿ ತಿಳಿಯಲೆಂದು ಲೈಟು ಕಂಬವನ್ನು,ಬೋರುವೆಲ್ಲನ್ನು ಗುರುತಾಗಿಟ್ಟುಕೊಂಡು ಹೆಜ್ಜೆ ಹಾಕತೊಡಗಿದ್ದ.ತನ್ನ ಮೆಚ್ಚಿನ ಮೇಷ್ಟ್ರರು ಕಾಣಬಹುದೆಂದು ಸುತ್ತಮುತ್ತ ಕಣ್ಣಾಡಿಸುತ್ತಾ ಮುಂದೆ ಸಾಗತೊಡಗಿದ್ದ.ಮಂಜನಿಗೆ ಮೇಷ್ಟ್ರು ಹೇಳುತ್ತಿದ್ದ ಸಂಗತಿಗಳು ನೆನಪಾದವು.ಬೆಳೆಯುವ ಮಕ್ಕಳು, ಆದರ್ಶ ಪುರುಷರ ಜೀವನವನ್ನು ಅರಿಯಬೇಕೆಂದು,ಗಾಂಧೀಜೀಯ ಆತ್ಮಕಥೆಯ ಪುಸ್ತಕವನ್ನು ಓದಲು ಕೊಟ್ಟದು,ಪುಸ್ತಕವನ್ನು ತೊರೆಯ ಪಕ್ಕದ ಹುಲ್ಲಿನ ಮೇಲೆ ಕುಳಿತು,ಜೇನುಗುಡ್ಡದ ಮೇಲೆ,ಮಾವಿನ ಮರದ ಕೊಂಬೆಯ ಮೇಲೆ,ಕರೆಂಟಿಲ್ಲದ ತನ್ನ ಮನೆಯ ಚಿಮಣಿಯ ದೀಪದ ಬೆಳಕಿನಲ್ಲಿ,ಕುಳಿತು ಓದಿದ್ದು ನೆನಪಾಯಿತು.ಅದಕ್ಕಿಂತಲೂ ಒಂದು ಭಾನುವಾರ ನಾಲ್ಕೈದು ಹುಡುಗರೊಡನೆ ಮೇಷ್ಟ್ರರು ಜೇನುಗುಡ್ಡಕ್ಕೆ ಹೋದಾಗಿನ ಅನುಭವ ಮರೆಯುವಂತಾಹದಲ್ಲ.ಅಂದು ಎಷ್ಟೊಂದು ವಿಚಾರಗಳ ಬಗ್ಗೆ ಹೇಳಿದರು.'ಪ್ರಕೃತಿ ರಹಸ್ಯಗಳ ಗಣಿ,ಪ್ರಕೃತಿ ಮುನಿದರೆ ಯಾವ ಜೀವಿಯು ಬದುಕಲು ಸಾಧ್ಯವಿಲ್ಲ,ಪ್ರಕೃತಿಯ ನಾಶ,ಪರೋಕ್ಷವಾಗಿ ಮಾನವನ ನಾಶ,ಅದರ ಪರಿಣಾಮ ಈಗ ಆಗದಿದ್ದರೂ ಮುಂದಿನ ಪೀಳಿಗೆಗೆ ಅದರ ಪ್ರಭಾವ ಆಗೇ ಆಗುತ್ತದೆ'ಎಂದದ್ದು.'ನಿಮ್ಮ ನಮ್ಮೆಲ್ಲರ ಹಿರಿಯರು ಶೋಷಣೆಗೆ ಗುರಿಯಾಗಲು ಕಾರಣ, ಅವರ ಅಜ್ಞಾನ ಮತ್ತು ಮುಗ್ಧತೆ.ಶೋಷಣೆಯಿಂದ ಹೊರಬರಬೇಕಾದರೇ ಶಿಕ್ಷಣವೊಂದೇ ದಾರಿ.ನಮ್ಮ ಹಿರಿಯರು ಶಿಕ್ಷಣದಿಂದ ವಂಚಿತರಾದರು.ಶಿಕ್ಷಣದ ಸಿಹಿಯನ್ನು ಕಹಿಯೆಂದು ತಿಳಿದರು.ಅವರ ಕಾಲ ಮುಗಿಯಿತು.ಆದರೆ ಶೋಷಣೆ ಇನ್ನೂ ನಿಂತಿಲ್ಲ.ಮುಂದಿನ ಪೀಳಿಗೆಯವರಾದ ನೀವುಗಳು ಶೋಷಣೆಯಿಂದ ಮುಕ್ತರಾಗಬೇಕಾದರೆ ಶಿಕ್ಷಣ ಪಡೆಯಲೇಬೇಕು'ಎಂದು ಭರವಸೆ ಮೂಡಿಸಿದು ನೆನಪಾಯಿತು.

ಕಾಮೆಂಟ್‌ಗಳಿಲ್ಲ: