ಮಂಗಳವಾರ, ಏಪ್ರಿಲ್ 12, 2011

ಕವಿಯಾಗಬೇಕೆಂದರೆ

'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು? ಸುತ್ತಲಿನ ಜಗತ್ತನ್ನು ಗಮನಿಸುತಿರಬೇಕು ಎಂದಿರಬಹುದೇ?ಅಥವಾ ಬರೆದ ಬರಹ ಅಥವಾ ಕವಿತೆಯೊಂದನ್ನು ಕೇಳಲು ಕೇಳುಗರಿರಬೇಕೆಂಬುದು ಇದರ ಅರ್ಥವೆ? ನಮ್ಮ ನಾಡಿನ ಕವಿಗಳ ಜೀವನ ಚರಿತ್ರೆಗಳನ್ನು ಓದಿದಾಗ ತಿಳಿಯುದೇನೆಂದರೆ ಅವರೆಲ್ಲಾ ಹೆಚ್ಚುಹೆಚ್ಚು ಪುಸ್ತಕಗಳನ್ನು ಓದುತ್ತಿದರು.ಮತ್ತು ಅವರ ಗೀಚಿದನೆಲ್ಲ ಕೇಳಿ ಪ್ರೋತ್ಸಾಹಿಸುವವರು ಇದ್ದರು.ತಾ.ರಾ.ಸು.ರವರು ಪುಸ್ತಕ ಓದಲೆಂದೇ ಎರಡು ಬಾರಿ ಮನೆ ಬಿಟ್ಟು ಓಡಿಹೋಗಿದರಂತೆ.ತಾ.ರಾ.ಸು.ರವರ ಸಂಬಂದಿಕರಾದ ವೆಂಕಣಯ್ಯನವರು ತಾ.ರಾ.ಸು.ರವರ ಓದುವ ಹವ್ಯಾಸವನ್ನು ಗುರುತಿಸಿ ಬೇರೆ ಯಾರಿಗೂ ಪ್ರವೇಶವಿರದ ತಮ್ಮ ಮನೆಯ ಗಂಥ್ರಾಲಯದ ಪುಸ್ತಕವನ್ನು ಓದಲು ಹೇಳಿದರು. ಹಾಗೇಯೇ ಕುವೆಂಪುರವರು ಓದಲು ಮೈಸೂರಿಗೆ ಬಂದಾಗ ಹೆಚ್ಚಿನ ಸಮಯ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು.ಕುವೆಂಪುರವರು ಓದಬೇಕೆಂದುಕೊಂಡ ಪುಸ್ತಕ ಬೇರೆಯಾರದರೂ ಓದುತ್ತಿದರೆ,ಅವರು ಓದುವವರೆಗೆ ಕಾದು ನಂತರ ಓದುತ್ತಿದರು.ಅದೇ ಗ್ರಂಥಾಲಯದಲ್ಲಿ ಓದಿದ್ದ ವಿವೇಕಾನಂದ,ರಾಮಕಷ್ಣಪರಮಹಂಸ,ಶಾರದಮಾತೆಯವರ ಜೀವನ ಚರಿತ್ರೆ,ಕುವೆಂಪುರವರ ಬದುಕನ್ನೇ ಬದಲಾಯಿಸಿತು.ದೇಶ-ವಿದೇಶದ ಪ್ರಖ್ಯಾತ ಕವಿಗಳ ಕೃತಿಗಳ ಓದು,ಬೇರೆ ದೇಶದ ಜನಜೀವನವನ್ನು ಅರಿಯಲು ಸಹಾಯಕವಾಯಿತು. ಸಾಹಿತ್ಯ ಎಂದರೆ ನಮ್ಮ ಅನುಭವ ಅಥವಾ ಭಾವನೆಯನ್ನು ಉಚಿತ ರೀತಿಯಲ್ಲಿ ದಾಖಲಿಸುವುದು.ಪುಸ್ತಕಗಳನ್ನು ಓದುವ ಮೂಲಕ,ಸುತ್ತಲಿನ ವಿದ್ಯಮಾನಗಳನ್ನು ಗಮನಿಸುವುದರಿಂದ ನಮ್ಮ ಭಾವಕೋಶ ಬೆಳೆಯುತ್ತದೆ.ಆ ಮೂಲಕ ಉತ್ತಮ ಸಾಹಿತ್ಯಸೃಷ್ಟಿ ಸಾಧ್ಯ.ಇನ್ನೂ ಕಥೆ ಕವನಗಳನ್ನು ಕೇಳುವ,ಪ್ರೋತ್ಸಾಹಿಸುವವರು ಈಗ ಕಡಿಮೆಯೆಂದೇ ಹೇಳಬಹುದು.ಕೇಳುಗರಲ್ಲದವರ ಬಳಿ ಹೇಳಿಕೊಳ್ಳುವುದು ಅಪಾಯಕಾರಿ.ಯಾಕೆಂದರೇ ಆನಂತರ ನಮ್ಮನ್ನು ನೋಡುವ ಅವರ ದೃಷ್ಟಿಯೇ ಬದಲಾಗಬಹುದು.ಕೇಳುಗರಿಲ್ಲದ ಕವನ ಮಂಕಾಗುತ್ತದೆ.ಆಗಷ್ಟೇ ಅರಳುತ್ತಿರುವ ಕವಿ ತೆರೆಮರೆಗೆ ಸರಿಯುತ್ತಾನೆ. ಓದುವ ಹವ್ಯಾಸವಿದ್ದು,ಬರೆದದ್ದನೆಲ್ಲಾ ಕೇಳುವ ಕೇಳುಗರಿದ್ದರೆ ಕವಿಗಳಾಗುವುದರಲ್ಲಿ ಸಂದೇಹವಿಲ್ಲ.

ಗುರುವಾರ, ಏಪ್ರಿಲ್ 7, 2011

ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ನಿಗೂಢವ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ ಜೊತೆಯಲ್ಲಿ ಮನಬಿಚ್ಚಿ ಹಾಡು.

ಭಾನುವಾರ, ಏಪ್ರಿಲ್ 3, 2011

ಮಲೆನಾಡಿನ ಬೆಳದಿಂಗಳ ರಾತ್ರಿ

ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ.ರಾತ್ರಿ ಬೇಟೆ ಹುಡುಕುವ ಬಾವಲಿಗಳ ಹಿಂಡು ತಿಂಗಳ ಬೆಳಕಿನಲ್ಲಿ ಗೋಚರಿಸುತಿವೆ.ಈ ವಿದ್ಯಮಾನಗಳು ನಡೆಯುವ ವೇಳೆಯಲ್ಲೇ ಕೆಳಗೆ,ತುಂಬ ಕೆಳಗೆ ಬೆಂಕಿಯ ಜ್ವಾಲೆ ದಗದಗಿಸಿ ಉರಿಯುತ್ತಿದೆ.ಆ ದಗದಗಿಸುವ ಬೆಂಕಿಯ ಬೆಳಕು ಸುತ್ತಲೂ ಕುಳಿತು ಚಳಿ ಕಾಯಿಸುತ್ತಿರುವ ಮಂದಾಯ ಕಣ್ಣುಗಳಲ್ಲಿ ಪ್ರತಿಪಲಿಸುತ್ತಿದೆ.ಅಲ್ಲೆ ಬೆಂಕಿಯ ಒಂದು ಬದ್ದಿಯಲ್ಲಿ ನಾಯಿಯೊಂದು ಮುದುಡಿ ಮಲಗಿದೆ.ಕಾಡುಗತ್ತಲೆಯ ಗರ್ಭದೊಳಗಿಂದ ಜೀರುಂಡೆಗಳ ಜಿರ್ ಜಿರ್ ಸದ್ದು ಸನ್ನಿವೇಶಕ್ಕೆ ಹಿಮ್ಮೇಳವನ್ನು ಒದಗಿಸಿದೆ.ಮಿಂಚುಹುಳುಗಳು ಅಲ್ಲೊಂದು ಇಲ್ಲೊಂದು ಬೆಳಗಿ,ಮಸಿಗತ್ತಲೆಯ ನಡುವೆ ಬೆಳಕಿನ ಕಿಡಿಯನ್ನು ಸೋಕಿಸಿ ಬೆಳಕಿನ ಇರುವಿಕೆಯನ್ನು ಸಾರಿಸಾರಿ ಹೇಳುತಿದೆ.ಕಾನನದ ಯಾವುದೋ ಮೂಲೆಯಲ್ಲಿ ನರಿಯೊಂದು ಊಳಿಡುತ್ತಿದೆ.

ಮಂಗಟ್ಟೆಯ ದೆಸೆಯಿಂದ!

ಮಂಗಟ್ಟೆಹಕ್ಕಿ-ವಿಶೇಷವಾದ ಕೊಕ್ಕಿನಿಂದ,ಕೇಕೆಹಾಕಿ ಕೂಗುವ ದನಿಯಿಂದ,ಅದರ ಅದ್ಬುತವಾದ ಜೀವನಶೈಲಿಯಿಂದ ಕುತೂಹಲಕ್ಕೆ ಕಾರಣವಾದ ಹಕ್ಕಿ.ಮಂಗಟ್ಟೆಹಕ್ಕಿಗಳು ಇರುವಲ್ಲಿ ಜೀವವೈವಿದ್ಯ ಸಮೃದ್ದವಾಗಿರುತ್ತವಂತೆ.ಇವುಗಳು ಸಾಮಾನ್ಯವಾಗಿ ಜೋಡಿ,ಅಥವಾ ಗುಂಪುಗಳಲ್ಲಿ ಕಾಣಸಿಗುತ್ತವೆ.ಬೆಳಗಿನ ಜಾವ ನಮ್ಮ ಮನೆಯ ಪಕ್ಕದ ಗೋಣಿಮರದ ಮೇಲೆ ಕುಳಿತು ಒಂದು ಮಂಗಟ್ಟೆಹಕ್ಕಿ ಕೇಕೆಹಾಕತೊಡಗಿದರೆ,ಸ್ವಲ್ಪ ದೂರದಲ್ಲಿ ಮತ್ತೊಂದು ಮಂಗಟ್ಟೆ ಹಕ್ಕಿ,ಕೇಕೆ ಹಾಕಲು ಪ್ರಾರಂಭಿಸುತ್ತದೆ.ಒಂದರ ನಂತರ ಇನ್ನೊಂದರಂತೆ ಸರದಿಯಲ್ಲಿ ಕೇಕೆ ಹಾಕತೊಡಗುತ್ತವೆ.ಇವುಗಳು ಏನೂ ಸಂಭಾಷಣೆ ನಡೆಸುತ್ತಿರುತ್ತವೋ ಏನೋ.ಮಂಗಟ್ಟೆಯ ದನಿಯಂತೂ ತುಂಬ ದೂರದವರೆಗೂ ಕೇಳಿಸುತ್ತದೆ.ಇವುಗಳ ಸಂಭಾಷಣೆಗೆ ಹಿಮ್ಮೇಳವನ್ನು ನೀಡಲೆನ್ನೂವಂತೆ,ಕಾಡುಕೋಳಿಗಳು ಸಹ ಕೂಗತೊಡಗುತ್ತವೆ.ಮನೆಯ ಹಿಂದಿನ ಗೊಬ್ಬರದ ಗುಂಡಿಯ ಬಳಿ ಕೆದಕುತ್ತಿದೆ ಸಾಕುಕೋಳಿಗಳು ಗಾಬರಿಗೊಂಡು ಅರಚತೊಡಗುತ್ತದೆ.ನೋಡನೋಡುತ್ತಿದಂತೇ ಪರಿಸರ ಗಾಬರಿ-ಗದ್ದಲಗಳಿಂದ ತುಂಬಿ ಹೋಗುತ್ತವೆ.