ಬುಧವಾರ, ಏಪ್ರಿಲ್ 18, 2012

ಕಥೆ:ಪೇಟೆ-೨

ಆದರೆ ಗೌಡರ ಯೋಚನೆಯೇ ಬೇರೆಯಿತ್ತು.ಗೌಡರು ಪೇಟೆಗೆ ಬಂದಿದ್ದು ಡಿಸೇಲ್ ಕೊಳ್ಳಲಾದರೂ,ಅದು ಮಾತ್ರ ಕಾರಣವಾಗಿರಲಿಲ್ಲ.ನಂಜೇಗೌಡರ ಅನೇಕ ದೌರ್ಬಲ್ಯಗಳಲ್ಲಿ ಕುಡಿತವೂ ಒಂದು.ಅವರ ಇತರ ಕುಡುಕ ಗೆಳೆಯರು ತಮ್ಮ-ತಮ್ಮ ಮನೆಗಳಲ್ಲಿ ನೆಪ ಹೇಳಿ ಪೇಟೆ ತಿರುಗಲು ಬರುತ್ತಿದರು.ವಾರದ ಒಂದು ದಿನ ಎಲ್ಲರೂ ಕೂಡಿ ಗುಂಡುಪಾರ್ಟಿ ಮಾಡುವುದು ಮಾಮೂಲಾಗಿತ್ತು.ಇ ದಿನದ ಪಾರ್ಟಿಗೆ ಪೇಟೆಗೆ ಬರಲು ಡೀಸೆಲ್ ತರುವುದು ನೆಪ ಮಾತ್ರವಾಗಿತ್ತು.ಆದರೆ ನಂಜೇಗೌಡರು ಮುಚ್ಚುಮರೆ ಮಾಡುವುದು ಅಗತ್ಯವಿತ್ತು.ಬೆಟ್ಟದೂರಿನಲ್ಲಿ ನಂಜೇಗೌಡರ ವಂಶಕ್ಕೆ ಗೌರವವಿತ್ತು.ಬೆಟ್ಟದೂರಿನ ಗ್ರಾಮದೇವತೆ ದೇವಿರಮ್ಮನ ದೇವಸ್ಥಾನದ ನಿರ್ವಣನೆಯ ಜವಾಬ್ದಾರಿ ಹಿಂದಿನಿಂದಲೂ ನಂಜೇಗೌಡರ ವಂಶದವರದಾಗಿತ್ತು.ಅದು ಇಲ್ಲದೇ ಈಸಲದ ಗ್ರಾಮ ಪಂಚಾಯತಿಯ ಅದ್ಯಕ್ಷ ಸ್ಥಾನಕ್ಕೆ ನಂಜೇಗೌಡರು ಸ್ಪರ್ದಿಸುವವರಿದ್ದರು.ಮನೆಗೆ ತಂದು ಕದ್ದುಮುಚ್ಚಿ ಕುಡಿಯಲು ಸಾದ್ಯವಿರಲಿಲ್ಲ.ಅವರ ವಂಶದಲ್ಲಿ ಯಾರು ಸಹ ಕುಡಿಯುತಿರಲಿಲ್ಲ.(ಎಲ್ಲೋ ಕೆಲವರು ಮಾತ್ರ ಕದ್ದು ಮುಚ್ಚಿ ಕುಡಿಯುತ್ತಿದರಷ್ಟೇ).ಈ ಕಾರಣದಿಂದಾಗಿ ಗೌಡರು ಗೌಪ್ಯತೆ ಕಾಪಾಡುವ ಅಗತ್ಯವಿತ್ತು. ನಂಜೇಗೌಡರು ಮತ್ತು ಮಂಜ ಪೇಟೆಯನ್ನು ತಲುಪುವಷ್ಟರಲ್ಲಿ ಮಳೆ ಸಂಪೂರ್ಣ ಕಡಿಮೆಯಾಯಿತು.ಸಂಪೂರ್ಣವಾಗಿ ಕತ್ತಲಾವರಿಸಿತ್ತು.ಮಂಜ ರಾತ್ರಿಯ ಪೇಟೆಯನ್ನು ಕಂಡಿರಲಿಲ್ಲ.ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಬೀದಿಗಳನ್ನು ನೋಡಿ ದಂಗಾಗಿ ಹೋದ.ನಂಜೇಗೌಡರು ಕಾಕನ ಕ್ಯಾಂಟಿನ್ ಬದಿಗೆ ಬೈಕನ್ನು ನಿಲ್ಲಿಸಿ,ಬೈಟು ಕಾಫಿಗೆ ಹೇಳಿ,ಸಿಗರೇಟು ಹಚ್ಚಿಕೊಂಡರು.ಮಂಜ ಅಲ್ಲೇ ನಿಂತು ಕಾಕನ ಕ್ಯಾಂಟಿನಿನ ಟೇಬಲ್ಲಿನ ಮೇಲೆ ಜೋಡಿಸಿದ ಗಾಜಿನ ಬಾಟಲಿಗಳಲ್ಲಿನ ಬನ್ನು,ಬ್ರೆಡ್ಡು,ಬತ್ತಾಸುಗಳನ್ನು ತದೇಕಚಿತ್ತದಿಂದ ನೋಡತೊಡಗಿದ್ದ.ಅಷ್ಟರಲ್ಲಿ ಕಾಫಿ ಮಂಜನ ಕೈಗೆ ಬಂತು.ನಂಜೇಗೌಡರು ಮಂಜನಿಗೆ ಬನ್ನನ್ನು ಕೊಟ್ಟು,ಅಲ್ಲಿ ಯಾರೋ ಪರಿಚಯದವರೊಡನೆ ಮಾತನಾಡುತ್ತಾ ನಿಂತರು.

ಕಾಮೆಂಟ್‌ಗಳಿಲ್ಲ: